Saturday, October 31, 2009
ನಕ್ಕರೆ ಜೋಕೇ ; ನಗದಿದ್ರೆ ಜೋಕೆ !
ಒಮ್ಮೆ ಅವರ ಧರ್ಮಪತ್ನಿ ತವರಿಗೆ ಹೊರಟಾಗ ಅಡುಗೆಮನೆಯ ಉಸ್ತುವಾರಿಯನ್ನು ರಾ.ಶಿ.ಯವರಿಗೆ ನೀಡಲು ಅನುಮಾನಿಸುತ್ತಿದ್ದರು. ಆಗ ರಾ.ಶಿ.ಯವರು ಸಮಯಪ್ರಜ್ಞೆಯಿಂದ, " ನೀನೇನೂ ಯೋಚ್ನೆ ಮಾಡಬೇಡ. ನಾನೂ ಹೆಣ್ಣು ಮಕ್ಕಳೂ ಅಡುಗೆ ಮಾಡ್ಕೋತೀವಿ. ಕೂದಲು ಯಾವಾಗ ಹಾಕಬೇಕು ಅನ್ನೋದನ್ನ ಮಾತ್ರ ಹೇಳಿಬಿಟ್ಟು ಹೋಗು!" ಅಂತ ಹೇಳಿ ಮನೆಯವರೆಲ್ಲರಲ್ಲಿ ನಗೆಯುಕ್ಕಿಸಿದ್ದರು.
*******
ಇತ್ತೀಚೆಗೆ ಸಾಮ್ರಾಟರು ಅಮೇರಿಕೆಗೆ ಹೋಗಿದ್ದು ಎಲ್ಲರಿಗೂ ತಿಳಿದೇ ಇದೆ. ಇಲ್ಲಿ ಮನುಷ್ಯನ ತಲೆಯನ್ನೂ ಸೇರಿದಂತೆ ಒಂದನ್ನೂ ಬಿಡದೇ ತಿನ್ನುವವರಾದರೂ ಒಮ್ಮೆಯಾದರೂ ಅಮೇರಿಕನ್ ಕೋಳಿ ತಿನ್ನುವ ಚಪಲ, ಆಸೆ ಹೆಚ್ಚಾಯಿತು. ಹೋಟೆಲ್ ಗೇನೋ ಹೋದರು, ಆದರೆ ಕೋಳಿಗೆ ಇಂಗ್ಲೀಶ್ ನಲ್ಲಿ ಏನನ್ನುವರು ಅನ್ನೋದೇ ಮರೆತುಹೋಯಿತವರಿಗೆ. ಪೇಚಿಗಿಟ್ಟುಕೊಂಡಿದ್ದರೂ
ಕೊನೆಗೊಂದು ಐಡ್ಯಾ ಮಾಡ್ಯಾರು. ಅವರು ಹೇಳಿದ್ದು ಹೀಗಿದೆ:
"ಗಿವ್ ಮಿ ಎಗ್ಸ್ ಮದರ್!"
******
ಅವತ್ತು ಟ್ರೈನ್ ಒಂದು ಸ್ಟೇಷನ್ ನಲ್ಲಿ ನಿಲ್ಲುತ್ತದೆ.
ಸಾಮ್ರಾಟರು ಪಿಳಿಪಿಳಿ ಹೊರಗೆ ನೋಡುತ್ತಿದ್ದುದು ಬಿಟ್ಟರೆ ಏನೂ ಗೊತ್ತಾಗುತ್ತಿದ್ದಿಲ್ಲ. ಮೊದಲ ಬಾರಿಯ ಅಮೇರಿಕ ಪಯಣ ಅಲ್ಲವೇ. ಆದರೆ ಈ ವಿಷಯ ಪಕ್ಕದ ಪಯಣಿಗರಿಗೆ ಹ್ಯಾಗೆ ಗೊತ್ತಾಗಬೇಕು?
ಪಕ್ಕದಲ್ಲಿ ಕೂತ ಪುಣ್ಯಾತ್ಮ " ಇದು ಯಾವ ಸ್ಟೇಷನ್?" ಅಂತ ಕೇಳಿದ.
ಸ್ವಲ್ಪ ಹೊತ್ತು ಹೊರಗೆ ನೋಡಿ ಗಾಢವಾದ ಆಲೋಚನೆ ನಂತರ "ರೈಲ್ವೇ ಸ್ಟೇಷನ್!" ಅಂದರು.
********
( ಸಂಗ್ರಹ )
Monday, September 28, 2009
ಎಷ್ಟು ತಾಸು ನಿಮ್ಮದು ನಿದ್ದೆ?
ದಿನಕ್ಕೆ ನೀವೆಷ್ಟು ತಾಸು ಮಲಗುತ್ತೀರಿ ಎಂದು ಯಾರಾದರೂ ನಮ್ಮನ್ನು ಪ್ರಶ್ನಿಸಿದರೆ ನಾವು ಕೂಡಲೇ ಗಹಗಹಿಸಿ ನಕ್ಕುಬಿಡುತ್ತೇವೆ. ಅಸಂಬದ್ಧ ಪ್ರಶ್ನೆಯನ್ನು ಕೇಳಿ ಪೆಕರು ಪೆಕರಾಗಿ ಹಲ್ಲು ಕಿಸಿಯುವ ಅಡ್ಡಕಸುಬಿ ಜರ್ನಲಿಸ್ಟನ್ನು ಮುತ್ಸದ್ಧಿಯೊಬ್ಬ ಸಹನೆಯಿಂದ ನೋಡುವಂತೆ ಆತನನ್ನು ನೋಡುತ್ತಾ ಪಕ್ಕಕ್ಕೆ ಕರೆಯುತ್ತೇವೆ.
“ಮಗೂ ಉತ್ತರ ಸರಿಯಾಗಿರಬೇಕಾದರೆ ಸರಿಯಾಗಿ ಪ್ರಶ್ನಿಸುವುದನ್ನು ಕಲಿತುಕೋ. ನಿನ್ನ ಕಷ್ಟ ನಮಗೆ ಅರ್ಥವಾಗುತ್ತೆ. ಸಂಸತ್ತಿನಲ್ಲಿ ಸರಿಯಾದ ಪ್ರಶ್ನೆ ಕೇಳುವುದಕ್ಕೆ ಕಂತೆಗಟ್ಟಲೆ ನೋಟುಗಳನ್ನೇ ಚೆಲ್ಲಬೇಕು. ಹಿಂದೆ ಭಗತ್ ಸಿಂಗರು ಕರಪತ್ರಗಳನ್ನು ಚೆಲ್ಲಿದ್ದಂತೆ!
“ಎಷ್ಟು ತಾಸು ಮಲಗುತ್ತೀರಿ ಎಂದು ಕೇಳುವಾಗ. ರಾತ್ರಿಯಲ್ಲಿ ಎಷ್ಟು ತಾಸು ಮಲಗುತ್ತೀರಿ? ಹಗಲಲ್ಲಿ ಎಷ್ಟು ತಾಸು ಮಲಗುತ್ತೀರಿ ಎಂದು ನಿಖರವಾಗಿ ಪ್ರಶ್ನೆಗಳನ್ನು ರೂಪಿಸಬೇಕು.
“ರಾತ್ರಿ ಅಷ್ಟೂ ತಾಸು ಒಂದೇ ಮನೆಯಲ್ಲಿ, ಒಬ್ಬರ ಪಕ್ಕದಲ್ಲೇ ಮಲಗುತ್ತೀರೋ ಎಂದು ಹೆಚ್ಚುವರಿ ಪ್ರಶ್ನೆಯನ್ನು ಕೇಳುವ ಮುನ್ನ ಹೊಸ ಹಲ್ ಸೆಟ್ ಸ್ಪಾನ್ಸರ್ ಮಾಡುವ ಶಕ್ತಿ ನಿನ್ನ ಭಾವಿ ಮಾವನಿಗೆದೆಯೇ ತಿಳಿದುಕೊಳ್ಳಬೇಕು.
“ಹಗಲು ಎಷ್ಟು ತಾಸು, ಎಷ್ಟು ಬಾರಿ ಮಲಗುತ್ತೀರಿ ಎಂದು ಕೇಳಿದರಷ್ಟೇ ಸಾಲದು. ಸಿಟಿ ಬಸ್ಸಿನಲ್ಲಿ ಸೀಟ್ ಸಿಕ್ಕರೂ, ಸಿಗದಿದ್ದರೂ ಪಕ್ಕದವನೆ ಭುಜದ ಮೇಲೊರಗಿ ನಿದ್ದೆ ಮಾಡುವಿರಾ, ಎಷ್ಟು ಬಾರಿ ನಿಮ್ಮ ಪವಿತ್ರ ಲಾಲಾರಸವನ್ನುಕ್ಕಿಸಿ ಬಸ್ಸಿನ ಸೀಟುಗಳನ್ನು ಪುನೀತಗೊಳಿಸಿದ್ದೀರ, ಆಫೀಸಿನಲ್ಲಿ ಮೊದಲ ಫೈಲು ತೆರೆಯುತ್ತಿರುವಾಗ ನಿದ್ದೆಗೆ ಜಾರುವಿರೋ, ಮೊದಲ ಕಾಫಿಯಾದ ನಂತರವೋ, ಕ್ಸಾಸ್ ರೂಮುಗಳಲ್ಲಿ ಗದ್ದಕ್ಕೆ ಕೈ ಊರಿ ಸ್ವಪ್ನಲೋಕಕ್ಕೆ ತೆರಳುವಿರೋ ಇಲ್ಲ ಟೈಟ್ ಆದರೂ ಬ್ರೈಟ್ ಆದ ಕುಡುಕನ ಹಾಗೆ ತೂಕಡಿಕೆಸ್ತಂಭನ ಆಸನದಲ್ಲಿ ಪವಡಿಸುವಿರೋ, ಊಟವಾದ ನಂತರ ನಿದ್ದೆ ಮಾಡುವುದಕ್ಕೆ ಫ್ಯಾನ್ ಆವಶ್ಯಕವೇ? ಧ್ಯಾನದ ಯಾವ ಹಂತದ ನಂತರ ನಿದ್ರಾದೇವತೆಯ ಪ್ರವೇಶವಾಗುತ್ತದೆ? ಹೀಗೆ ಪ್ರಶ್ನಾವಳಿಯನ್ನು ರೂಪಿಸಬೇಕು.
“ಏಯ್! ಹುಡುಗ, ಎದ್ದೇಳೋ! ಏನೋ ಕೇಳ್ತಿದ್ದೆಯಲ್ಲೋ...”
Saturday, September 26, 2009
ಗೇಟ್ಸ್ ಗೆ ಸಾಮ್ರಾಟರು ಬರೆದ ಪತ್ರ!
--
Wednesday, September 23, 2009
ಸರಿ, ಮಕ್ಕಳೆಷ್ಟು!
ಮನೆಮನೆಗೆ ತೆರಳಿ ಜನಗಣತಿ ಮಾಡುವಾಕೆಗೆ ಆಕೆಯೊಬ್ಬಳು ಎದುರಾದಳು.
“ಮೇಡಂ ಜನಗಣತಿಗೆ ನಿಮ್ಮ ವಿವರವನ್ನು ಸೇರಿಸಿಕೊಳ್ಳಬೇಕಿತ್ತು.”
“ಏನು ಬೇಕಿತ್ತು ಕೇಳಿ...”
“ನಿಮ್ಮ ಹೆಸರು?”
“ಸಿಸ್ಟರ್ ಇಸಾಬೆಲ್”
“ಮದುವೆಯಾಗಿದೆಯಾ?”
ತುಸು ಯೋಚಿಸಿ ಆ ನನ್ ಉತ್ತರಿಸಿದಳು, “ಹು, ಜೀಸಸ್‌ನೊಂದಿಗೆ”
ಜನಗಣತಿಯಾಕೆ ಯಾಂತ್ರಿಕವಾಗಿ ಪ್ರಶ್ನಿಸಿದಳು, “ಸರಿ, ಎಷ್ಟು ಮಕ್ಕಳು?”
ಸಿಸ್ಟರ್ ಆಸ್ಪತ್ರೆಯ ಸಿಸ್ಟರ್‌ನ ಭೇಟಿ ಮಾಡುವವರೆಗೂ ಎಚ್ಚರವಾಗಲಿಲ್ಲ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕೆ?
Thursday, September 17, 2009
ನೀವೇ ಬದಲಿಸಿಕೊಳ್ಳಿ!
ಅತ್ತ ಕಡೆಯಿಂದ ಹೀಗೆ ಉತ್ತರ ಬರುತ್ತದೆ.
"ನೀವು ದಿಕ್ಕು ಬದಲಿಸಿಕೊಳ್ಳಲೇಬೇಕು, ಇದು ಲೈಟ್ ಹೌಸ್!"
Saturday, May 9, 2009
ನೀವು ನಕ್ಕರೆ.. ಕಾಫಿಗೆ ಬೇಡ ಸಕ್ಕರೆ!
ಆದರೆ ಐದು ನಿಮಿಷದ ಬಳಿಕ ಮತ್ತೆ ಫೋನ್ ಮಾಡಿ.."ಬರ್ತಿದ್ದೇನೆ, ಮೊದಲು ಮಿಸ್ಸಾಗಿ ಕಾರಿನ ಹಿಂದಿನ ಸೀಟ್ ನಲ್ಲಿ ಕುಳಿತುಬಿಟ್ಟಿದ್ದೆ.." ಅಂದರು.
******
ಸರ್: ಯಾಕ್ಲೇ ಗುಂಡಾ..ಮುಂದ ಇನ್ ಶರ್ಟ್ ಮಾಡಿ ಹಿಂದಾ ಹೊರಗಾ ಬಿಟ್ಟಿದೀಯಲ್ಲಾ?
ಗುಂಡ: "ಮುಂದ ಅಂಗಿ ಹರ್ದೆತ್ರಿ... ಹಿಂದ ಪ್ಯಾಂಟ್ ಹರ್ದೆತ್ರಿ.. ಅದಕ್ಕೆ ರಿ ಸರ..."
*****
ರಿಸೆಷನ್ ಟೈಮ್ ನಲ್ಲಿ ಕಂಪನಿಯೊಂದು ಬಳಸಬಹುದಾದ ತಂತ್ರ.
ಟಿಶ್ಯೂ ಪೇಪರ್ ನ ಬದಲು ಹೊಸತಾಗಿ ಕಾಲೇಜು ಮುಗಿಸಿದವರು ಕೆಲಸಕ್ಕಾಗಿ ನೀಡಿದ ರೆಸ್ಯೂಮ್ ಬಳಸುವುದು!
*********
ನಗೆಸಾಮ್ರಾಟರು ಸಲೂನ್ ಗೆ ಹೋದಾಗ ನಡೆದ ಘಟನೆ.
ಅಲ್ಲಿಗೆ ಒಬ್ಬ ನೋಡಲು ಒಂದು ಆಂಗಲ್ ನಲ್ಲಿ ಗಾಂಧಿಯಂತೆ ಕಾಣುತ್ತಿದ್ದ ವ್ಯಕ್ತಿ ಬಂದ ತಲೆಯಲ್ಲಿ ಯಾವ ಕಡೆಯಿಂದ ಕೂಡಿಸಿದರೂ ಒಂಭತ್ತಕ್ಕಿಂತ ಹೆಚ್ಚು ಕೂದಲು ಕಾಣ್ತಿಲ್ಲ. ಅವನ ತಲೆ ನೋಡಿ ಸಿಟ್ಟಾದ ಸಲೂನಿನ ಬಿಲ್ಲು, " ಏನ್ಸಾರ್ ಕೌಂಟ್ ಮಾಡಲಾ? ಕಟ್ ಮಾಡಲಾ?" ಎಂದು ಕೇಳಿದ್ದಕ್ಕೆ
ಆ ವ್ಯಕ್ತಿ ವಿನಮ್ರತೆಯಿಂದ.."ಕಲರ್ ಮಾಡು.." ಅಂದ!
ನೋಡಿ ಸಾಮ್ರಾಟರು ಸುಸ್ತು.
******
ಸಾಮ್ರಾಟರ ಮಗನಿಗೆ ಶಾಲೆಯಲಿ ರೇಸ್ ಬಗ್ಗೆ ಬರೆಯಲು ಹೇಳಿದ್ದರು. ಅದನ್ನು ಒಂಚೂರೂ ಎಡಿಟ್ ಮಾಡದೇ ಇಲ್ಲಿ ನೀಡುತ್ತಿದ್ದೇವೆ.
"ಅದು ಇರುವೆಗಳ ಸೈಕಲ್ ರೇಸು. ಕುಂದಾಪುರದಿಂದ ಶುರುವಾದ ರೇಸು ಮುಗಿಯುವುದು ಉಡುಪಿಯಲಿ. ಒಂದು ಇರುವೆಯು ಇಲ್ಲದ ಗೇರನ್ನು ಕಲ್ಪಿಸಿಕೊಳ್ಳುತ್ತ ಸೈಕಲ್ ನ್ನು ಪಲ್ಸಾರ್ ತರಹ ಓಡಿಸುತ್ತಿತ್ತು. ಆಗ ಅಲ್ಲಿಗೆ ಸೈಟ್ ಸೀಯಿಂಗ್ ಗೆ ಬಂದ ಆನೆ ದಾರಿಗಡ್ಡವಾದಾಗ ಸಡನ್ನಾಗಿ ಬ್ರೇಕ್ ಹಾಕಿದ ಇರುವೆಯು .." ಅಡಿಕ್ ಬೂರ್ದು ಸೈಪನ ಮರೆ..!" (ಅಡಿಗೆ ಬಿದ್ದು ಸಾಯ್ತೀಯ ಮಾರಾಯ) ಅಂದಿತು.
ಮಗನ ಕಲ್ಪನೆಗಳ ಬಗ್ಗೆ ಹೆಮ್ಮೆ ಪಟ್ಟ ಸಾಮ್ರಾಟರು ಎಲ್ಲೆಡೆ ಹೇಳಿಕೊಂಡು ತಿರುಗುತ್ತಿದ್ದರೆ, ಮಗರಾಯ ’ಅಪ್ಪ ಹೀಗೆ ಹೇಳ್ತಾ ಇದ್ದರೆ ಆನೆ ಮರ್ಯಾದೆ ಏನಾಗಬೇಕಂತ’ ಆಲೋಚಿಸಿ ಆನೆಯನ್ನೇ ಹೀರೋ ಆಗಿಸಿ ಏನೋ ಬರೆಯುತ್ತಿದ್ದಾನಂತೆ!
*****
ಈ ಸಲ ಇಂಕ್ರಿಮೆಂಟು ನೀಡದ್ದಕ್ಕೆ ಸಿಟ್ಟಾದ ನಗೆಸಾಮ್ರಾಟರು ತನ್ನ ಬಾಸ್ ಗೆ ಧಮಕಿ ಹಾಕಿದ್ದು ಹೇಗೆ ಗೊತ್ತೆ?
" ಈ ತಿಂಗಳು ನನ್ನ ಸಂಬಳ ಹೆಚ್ಚು ಮಾಡದಿದ್ದರೆ, ಆಫೀಸಿನ ಎಲ್ಲರಿಗೂ ನೀವು ನನಗೆ ಇಂಕ್ರಿಮೆಂಟ್ ಕೊಟ್ಟಿರೆಂದು ಸುದ್ಧಿ ಹಬ್ಬಿಸುತ್ತೇನೆ..!"
*****
ಕಳೆದ ಸಲ ನಗೆ ಸಾಮ್ರಾಟರು ಅಮೇರಿಕಾಗೆ ಹೋಗಿದ್ದಾಗ ಅಲ್ಲೊಂದು ಮೆಶೀನ್ ನೋಡಿದರು. ಅದು ಕಳ್ಳರನ್ನು ಹಿಡಿವ ಯಂತ್ರವಾಗಿತ್ತು. ಅಲ್ಲೇ ಸಾಕ್ಷಾತ್ ಅವರ ಕಣ್ಣೆದುರೇ ಘಂಟೆ ೧೦ ಲೆಕ್ಕದಲ್ಲಿ ಕಳ್ಳರನ್ನು ಹಿಡಿಯಿತು. ಖುಷ್ ಆದ ಸಾಮ್ರಾಟರು ಭಾರಿ ಮೊತ್ತ ತೆತ್ತು ಕರ್ನಾಟಕದ ಪೋಲೀಸರಿಗೆ ತೋರಿಸುತ್ತೇನೆ ಅಂತ ಹೇಳಿಕೊಳ್ಳುತ್ತಿದ್ದರು.
ಆದರೆ ಇಲ್ಲಿ ಇಟ್ಟ ಮಾರನೇ ದಿನವೇ ಮೆಶೀನ್ ಕಳುವಾಯಿತಂತೆ.
*****
ಭೀಮನು ಧುರ್ಯೋದನನನ್ನು ಹೇಗೆ ಕೊಂದನು?
ಒಂದು ಮಾರ್ಕ್ಸಿನ ಪ್ರಶ್ನೆಯಾದರೆ ಸಾಮ್ರಾಟರ ಮಗ ಅಷ್ಟು ತಲೆತುರಿಸಿಕೊಳ್ಳುತ್ತಿರಲಿಲ್ಲ. ಅಷ್ಟು ದಡ್ಡನೆಂದು ತಿಳಿದಿರೇ? ಆ ಪ್ರಶ್ನೆ ೧೫ ಅಂಕಕ್ಕೆ ಕೇಳಲ್ಪಟ್ಟಿತ್ತು. ಆಗ್ಲೇ ಮೇಷ್ಟ್ರು ತುಂಬಾ ಸಲ ಹೇಳಿದ್ದರು ಹದಿನೈದು ಮಾರ್ಕ್ಸಿನ ಪ್ರಶ್ನೆಗೆ ಉತ್ತರಿಸುವಾಗ ಕೊನೆಯ ಪಕ್ಷ ಒಂದು ಪುಟವಾದರೂ ಬರೆಯಲೇಬೇಕೆಂದು. ಪ್ರಶ್ನೆ ಕೇಳುವವರಿಗೆ ಕಾಮನ್ ಸೆನ್ಸ್ ಬೇಡವೇ ಅಂತ ಬಯ್ದುಕೊಳ್ಳುತ್ತಾ ಕೊನೆಗೆ ಒಂದು ಉಪಾಯ ಕಂಡುಕೊಂಡ.
"ಭೀಮನು ಧುರ್ಯೋಧನನನ್ನು ಗುದ್ದಿ ಗುದ್ದಿ ಗುದ್ದಿ ಗುದ್ದಿ....." ಹೀಗೆ ಬರೆಯುತ್ತಾ ಪುಟದ ಕೊನೆಗೆ ".... ಗುದ್ದಿ ಕೊಂದನು." ಹೀಗೆ ಮುಗಿಸಿದ!
-
(ಕೋಳಿಯನ್ನು( ನಗೆಸಾಮ್ರಾಟರನ್ನು) ಕೇಳದೇ ಅಲ್ಲಿ ಇಲ್ಲಿ ಮಾಡಿದ ಸಂಗ್ರಹಕ್ಕೆ ಮಸಾಲೆ ಅರೆದದ್ದು ರಂಜಿತ್.)
Thursday, April 2, 2009
ನೀವು ಓಟು ಹಾಕ್ತೀರಾ?
ಲೋಕಸಭೆಗೆ ಚುನಾವಣೆಗಳು ನಡೆಯುತ್ತಿವೆ. ಮನೆಯಲ್ಲಿ ಅಪ್ಪನಿಗೆ ರಾಜಕೀಯದ ಹುಚ್ಚು ಇದ್ದು ಬಿಟ್ಟರಂತೂ ಮುಗಿತೂ. ಅಪ್ಪನ ಪೇಪರು, ಟಿವಿ ನ್ಯೂಸ್ ಚಾನಲ್ಲುಗಳ ಮೂಲಕ ಮಕ್ಕಳಿಗೂ ಸಾಂಕ್ರಾಮಿಕವಾಗಿ ರಾಜಕೀಯದ ಹುಚ್ಚು ಹತ್ತಿ ಬಿಡುತ್ತದೆ. ಕ್ರಿಕೆಟ್ ಪ್ರೇಮ, ಧಾರಾವಾಹಿ ಮೋಹ, ರಾಜಕೀಯದ ಪ್ಯಾಶನ್ನು ಸಹ ಒಂದು ಜನರೇಶನ್ನಿನಿಂದ ಮತ್ತೊಂದಕ್ಕೆ ಬಳುವಳಿಯಾಗಿ ಬರುವ ಆಸ್ತಿಯಾಗಿದೆ.
ನಿಮಗೆ ಓಟು ಹಾಕುವ ಅರ್ಹತೆ ಬಂದಿದೆ ಎನ್ನುವುದಾದರೆ, ನಿಮಗೆ ಈಗಾಗಲೇ ಓಟು ಹಾಕಿರುವ ಅನುಭವವಿದೆಯೆನ್ನುವುದಾದರೆ ಇನ್ನೊಂದೆರಡು ನಿಮಿಷ ನಾವಿಲ್ಲಿ ಮಾತಾಡಬಹುದು.
ನಿಮ್ಮ ಮೊದಲ ಒಟು ಚಲಾವಣೆಯ ಅನುಭವ ಹೇಗಿತ್ತು ಎಂದು ಎಲ್ಲಾ ಪತ್ರಿಕೆಗಳು ಕೇಳುತ್ತವೆ. ಉತ್ತರ ಕೊಡಬೇಕಾದವರೆಲ್ಲರೂ ನಾನು ಯಾವ ಜಾತಿ ಅಭಿಮಾನವಿಲ್ಲದೆ, ಪಕ್ಷಪಾತವಿಲ್ಲದೆ, ಪೂರ್ವಾಗ್ರಹವಿಲ್ಲದೆ ಅಂತಃಸಾಕ್ಷಿ ಹೇಳಿದಂತೆ ಓಟು ಹಾಕಿದೆ ಎನ್ನುತ್ತಾರೆ. ಆದರೆ ಪ್ರತಿ ಸಲದ ಚುನಾವಣೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳ ಇತಿಹಾಸ ಹಾಗೂ ಸಾಧನೆ ಗಮನಿಸಿದರೆ ಮತ ಚಲಾಯಿಸಿದವರ ‘ಅಂತಃಸಾಕ್ಷಿ’ಯ ಬಗೆಗೇ ಸಂಶಯ ಹುಟ್ಟುತ್ತದೆ.
ಅದೇನೇ ಇರಲಿ, ನಮ್ ಕಾಫಿ ಕ್ಲಬ್ಬಲ್ಲಿ ಕಾಫಿ ಘಮದ ಜೊತೆಗೆ ಚುನಾವಣೆ ಬಿಸಿಯನ್ನೂ ಸೇರಿಸೋಣ ಎನ್ನುವ ಆಲೋಚನೆ ನಮ್ಮದು. ಜೊತೆಗೆ ಬೇಸಿಗೆ ಬೇರೆ ಮೆಲ್ಲಗೆ ಶುರುವಾಗುತ್ತಿದೆ. ಬಿಸಿ ಅಧಿಕವಾದರೆ ತಿಳಿಸಿ, ಸಾಸರು ಬಳಸಿ.
ನೀವು ಓಟು ಹಾಕುವುದು ಪಕ್ಷವನ್ನು ನೋಡಿಯೋ ಅಥವಾ ನಿಮ್ಮ ಮತಕ್ಷೇತ್ರದ ಅಭ್ಯರ್ಥಿಯ ಸಾಧನೆಯ ಬಗ್ಗೆ ತಿಳಿದುಕೊಂಡೋ? ಮತ ಹಾಕುವುದು ಪಕ್ಷದ ಹೆಸರು ನೋಡಿ ಎನ್ನುವುದಾದರೆ ಆ ಪಕ್ಷದ ಬಗೆಗಿನ ಅಭಿಮಾನ ನಿಮಗೆ ಬೆಳೆದದ್ದು ಹೇಗೆ ಎಂದೂ ತಿಳಿಸಿ. ಏಕೆಂದರೆ ಒಂದೇ ಮನೆಯಲ್ಲಿ ನಾಲ್ಕು ಮಂದಿ ಓಟು ಹಾಕುವವರಿದ್ದರೆ ಬಹುತೇಕ ಎಲ್ಲರೂ ಒಂದೇ ಪಕ್ಷಕ್ಕೆ ಹಾಕುವ ಪದ್ಧತಿ ಇರುತ್ತೆ. ಇನ್ನು ನಿಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ನಿಂತ ಅಭ್ಯರ್ಥಿಗಳ ಬಗ್ಗೆ ನಿಮಗೇನು ಗೊತ್ತಿರುತ್ತೆ? ಅವರ ಬಗ್ಗೆ ತಿಳಿಯುವ ಪ್ರಯತ್ನವನ್ನು ಮಾಡುತ್ತೀರಾ?
ಹದವಾದ ಬಿಸಿಯ ಕಾಫಿಯ ಜೊತೆ ಲೋಕಾಭಿರಾಮದ ಈ ಹರಟೆಗೆ ಸ್ವಾಗತ...
Wednesday, April 1, 2009
ಕಾಫಿ ಕ್ಲಬ್ಬಿಗೆ ಬೀಗ
ವ್ಯಾಲಂಟೈನ್ ಡೇ ಸಂದರ್ಭದಲ್ಲಿ ನಾಡಿನ ಪ್ರಮುಖ ಸಂಘಟನೆಯ ವಿರುದ್ಧ ಕೆಲವು ಅವಹೇಳನಕಾರಿ ಪ್ರತಿಕ್ರಿಯೆಗಳನ್ನು, ಹೇಳಿಕೆಗಳನ್ನು ಪ್ರಕಟಿಸಿದ್ದೇವೆ ಎಂಬ ಕಾರಣಕ್ಕೆ ‘ಕಾಫಿ ಕ್ಲಬ್’ನ ಮೇಲೆ ಆ ಸಂಘಟನೆಯ ಕಣ್ಣು ಬಿದ್ದಿತ್ತು. ನಮ್ಮ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸುವ ಸಂಬಂಧ ಆ ಸಂಘಟನೆ ನಡೆಸುತ್ತಿದ್ದ ಪ್ರಯತ್ನಗಳನ್ನು ಇಷ್ಟು ದಿನ ನಾವು ಮೌನವಾಗಿ ಗಮನಿಸುತ್ತಿದ್ದೆವು. ಹೀಗಾಗಿ ಕ್ಲಬ್ಬಲ್ಲಿ ಹೆಚ್ಚಿನ ಚರ್ಚೆ ನಡೆದಿರಲಿಲ್ಲ.
ಈಗ ನ್ಯಾಯಾಲಯದಲ್ಲಿ ಕೇಸು ಕಡೆಯ ಹಂತಕ್ಕೆ ಬಂದಿದೆ. ಒಂದು ಜವಾಬ್ದಾರಿಯುತ ಸಂಘಟನೆಯ ಬಗ್ಗೆ, ಗೌರವಯುತ ಸಂಘಟಕನ ಬಗ್ಗೆ ಅವಹೇಳನಕಾರಿಯಾಗಿ ಬ್ಲಾಗಿನಲ್ಲಿ ಬರೆದದ್ದು ತಪ್ಪೆಂದು ನ್ಯಾಯಾಲಯ ತೀರ್ಪಿತ್ತಿದೆ. ತತ್ಸಂಬಂಧ ಈ ಬ್ಲಾಗಿನ ಮಾಲೀಕರನ್ನು, ಬರಹಗಾರರನ್ನೂ ವಾಗ್ದಂಡನೆಗೆ ಗುರಿ ಮಾಡಿ, ಅವರಿಂದ ಬೇಷರತ್ ಕ್ಷಮೆಯನ್ನು ಪಡೆಯುವ, ಬ್ಲಾಗನ್ನು ಮುಚ್ಚುವ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಲಾಗಿದೆ.
ಈ ಕಡೆಯ ಪೋಸ್ಟಿನಲ್ಲಿ, ಈ ಬ್ಲಾಗಿನ ಮಾಲೀಕನಾದ ನಾನು ಸುಪ್ರೀತ್.ಕೆ.ಎಸ್ ಆ ಸಂಘಟನೆಯ ಹಾಗೂ ಅದರ ಮುಖಂಡರ ಕ್ಷಮೆಯಾಚಿಸುವೆ. ಇನ್ನು ಮುಂದೆ ಇಂತಹ ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದು ಮುಚ್ಚಳಿಕೆ ನೀಡುವೆ.
ವಿ.ಸೂ: ಈ ಬ್ಲಾಗಿನಲ್ಲಿ ಇನ್ನು ಮುಂದೆ ಯಾವುದೇ ಬರಹ ಪ್ರಕಟವಾಗೋದಿಲ್ಲ.
Wednesday, February 25, 2009
ಬ್ಲಾಗ್ ಯಾಕೆ ಬರೆಯಬೇಕು?
ಕನ್ನಡಪ್ರಭದಲ್ಲಿ ಕೆಲಸ ಮಾಡುವ ಜೋಗಿ ಬ್ಲಾಗಿಸುತ್ತಿದ್ದಾರೆಂದರೆ ಇದೂ ಒಂದು ಬೇರೆಯೇ ತೆರನಾದ ಮಾಧ್ಯಮ ಎಂಬ ಅರಿವು ಅವರಿಗೂ ಇದ್ದಿರಬಹುದು ಅಲ್ಲದೇ ಅವರಂಥವರೇ ಬ್ಲಾಗಿಸುತ್ತಿರುವಾಗ ನಮಗೂ ಇದು ಒಳ್ಳೆಯ ಅಭಿವ್ಯಕ್ತಿಯ ಪ್ಲಾಟ್ ಫಾರಮ್ ಅನ್ನುವುದರಲ್ಲಿ ಅನುಮಾನವೇ ಬೇಡ ಎಂಬ ಭಾವನೆ ಮೂಡಿ ಬ್ಲಾಗಿಸಲು ಉತ್ಸಾಹ ಹುಟ್ಟುತ್ತಿತ್ತು. ಅಮಿತಾಭ್ ಬಚ್ಚನ್ ಗೆ ಬ್ಲಾಗು ಬರೆಯಲು 110 ಕೋಟಿ ನೀಡಿದ ಸುದ್ಧಿ ಕೇಳಿಯಂತೂ ನಮ್ಮ ಬ್ಲಾಗೂ ಓದಿ ಯಾರಾದರೂ ಅದಕ್ಕಿಂತ ಹೆಚ್ಚು ಕೊಡಲು ಮುಂದೆ ಬರುವ ಸಾಧ್ಯತೆ ಇಲ್ಲದಿಲ್ಲ ಎಂಬ ಹಗಲುಗನಸುಗಳೂ ದಂಡಿಯಾಗಿ ಬರತೊಡಗುತ್ತಿತ್ತು.
ಆದರೆ ಅವರೂ ರವಿಯ, ಭಟ್ಟರ ಮಾತಿಗೆ ಒಪ್ಪುವವರಂತೆ ಬ್ಲಾಗಿನಂಗಡಿ ಮುಚ್ಚಿ ಕನ್ನಡಪ್ರಭದ ಶಾಪಿಂಗ್ ಮಾಲ್ ನಲ್ಲೇ ಕುಳಿತರು.
ಒಳಗೆ ಕುಳಿತಿದ್ದ ಗೊಂದಲ ಮತ್ತೆ ನುಂಗಲು ಬಾಯ್ತೆರೆಯಿತು.
ಹೀಗೆ ದೊಡ್ಡೋರೆಲ್ಲಾ ಬ್ಲಾಗಿನಿಂದ ಪ್ರಯೋಜನವಿಲ್ಲ; ಮೂರ್ಕಾಸೂ ಹುಟ್ಟದ ಚಾಳಿ ಅನ್ನುತ್ತಿದ್ದರೆ ದಿನ ದಿನ ಬ್ಲಾಗು ಓದುವವರಿಗೆ, ಬರೆಯುವವರಿಗೆ ಕಡೆಯ ಪಕ್ಷ ಸುಮ್ಮನೆ ಕಾಫಿ ಕುಡಿಯುತ್ತಿದ್ದ ಸಮಯದಲ್ಲಾದರೂ ಆಲೋಚನೆ ಬಂದಿರುತ್ತೆ. ಮನದೊಳಗೆ ಚಿಂತನೆ ನಡೆದಿರುತ್ತೆ. ಒಂದು ಅಭಿಪ್ರಾಯ ಮೂಡಿರುತ್ತೆ.
ಯಾರೇನೇ ಅಂದರೂ ಇದು ಭಾರತ; ಇಲ್ಲಿ ಜನತೆಯೇ ಜನಾರ್ಧನ. ಜಾಸ್ತಿ ಜನ ಹೇಳುವುದೇ,ಒಪ್ಪಿಕೊಳ್ಳುವುದೇ ಸತ್ಯ. ನಿಮ್ಮ ಅಭಿಪ್ರಾಯವನ್ನೂ ಹೀಗೆ ಸುಮ್ಮನೆ ಲೈಟ್ ಆಗಿ ಹಂಚಿಕೊಳ್ಳಿ. ಡಿಕಾಕ್ಷನ್ನು ಸ್ವಲ್ಪ ಕಮ್ಮಿ ಇರಲಿ.
Friday, February 20, 2009
ಕಾಫಿ ಕ್ಲಬ್ಬು ಕೆಂಡ ಸಂಪಿಗೇಲಿ

ಕಾಫಿ ಕ್ಲಬ್ಬಿನಲ್ಲಿ ನಮಗೆ ಒಂದು ನಯಾಪೈಸೆ ವರಮಾನವಿಲ್ಲದ್ದರಿಂದ ನಮ್ಮಿಂದ ಜಾಹೀರಾತುದಾರರಿಗೆ, ನಮ್ಮ ಕಾಫಿ ಕ್ಲಬ್ಬನ್ನು ಹೊಗಳುವುದಕ್ಕೆ, ಗಿರಾಕಿಗಳನ್ನು ಸೂಜಿಗಲ್ಲಿನಂತೆ ಸೆಳೆಯುವುದಕ್ಕೆ ತಮ್ಮ ಶಬ್ಧ ಪಾಂಡಿತ್ಯವನ್ನು ಮಸೆಯುತ್ತ ಕುಳಿತ ಬುದ್ಧಿವಂತರಿಗೆ ಕೆಲಸವಿಲ್ಲದಂತಾಗಿದೆ. ರಿಸೆಷನ್ ಎಂಬ ಸಂಕಟಕ್ಕೆ ನಮ್ಮದೂ ಚೂರು ಕಾಣಿಕೆ ಈ ರೀತಿ ಸಂದಾಯವಾಗುತ್ತಿದೆ.
ಆದರೆ ಓದುವವರೇ ಇಲ್ಲದೇ ಬರೆಯುವವರು ಈ ಭೂಮಿಯ ಮೇಲೆ ಇರುವ ತನಕ ಬರೆಯುವವರನ್ನೆಲ್ಲಾ ಪ್ರೋತ್ಸಾಹಿಸುವವರು ಬೆನ್ನ ಮೇಲೆ ಏಟು ಹಾಕುವವರು (ಮೆಚ್ಚುಗೆಗೋ, ಅವರು ಕೊಡುವ ಕಾಟ ಸಹಿಸದೆಯೋ) ಇದ್ದೇ ಇರುತ್ತಾರೆ.
ನಮ್ಮ ಕಾಫಿ ಕ್ಲಬ್ಬಿಗೆ ಕೆಂಡ ಸಂಪಿಗೆ ಶುಭಾಶಯ ಕೋರಿದ್ದಾರೆ. ಅವರೇನೋ ಎಲ್ಲಾ ಬ್ಲಾಗುಗಳ ಬಗ್ಗೆ ಬರೆದು ಪುಕ್ಕಟೆ ಪಬ್ಲಿಸಿಟಿ ಕೊಡುತ್ತಾರೆ. ಅದರಲ್ಲೇನು ವಿಶೇಷ ಎಂದು ಕಾಫಿ ಕುಡಿಯದೆ ಸಕ್ಕರೆ ಕಮ್ಮಿಯಿದೆ ಎನ್ನುವ ಸಿನಿಕರಿಗೆ ಕಮ್ಮಿಯಿಲ್ಲ. ಬ್ಲಾಗು ತೆರೆದ ಮೇಲೆ ಒಂದಲ್ಲ ಒಂದು ದಿನ ಕೆಂಡ ಸಂಪಿಗೆಯಲ್ಲಿ ಕಾಣಬೇಕು ಎಂದು ಸಂಶೋಧನಾ ಪ್ರಬಂಧ ಮಂಡಿಸುವ ಪಂಡಿತರಿಗೂ ಕೊರತೆಯಿಲ್ಲ. ಆದರೆ ಸರಿಯಾಗಿ ಮುನ್ನೂರ ಅರವತ್ತೈದು ದಿನಗಳಿಗೊಮ್ಮೆ (ಫೆ ೨೯ಕ್ಕೆ ಹುಟ್ಟಿದವರನ್ನು ಬಿಟ್ಟು) ಬರ್ತ್ ಡೇ ಬರುತ್ತದೆಂದು ತಿಳಿದಿದ್ದರೂ ಆ ದಿನ ಸಂಭ್ರಮಿಸದೆ, ಅಟ್ಲೀಸ್ಟ್ ಸಂಭ್ರಮಿಸುವ ನಾಟಕವಾಡದೆ ಇರಲಾದೀತೇ? ಇಲ್ಲ ಅಲ್ಲವೇ?
ಅದಕ್ಕೆ ನಮ್ಮದು ಇಷ್ಟು ಸಂಭ್ರಮ! ಈ ಕಾಫಿ ಕಪ್ಪಿನೊಳಗಿಲ್ಲದ ಜ್ಞಾನೋದಯ ನಿಮಗೆ ಹಿಮಾಲಯದಲ್ಲೂ ಸಿಕ್ಕುವುದಿಲ್ಲ.