Monday, September 28, 2009

ಎಷ್ಟು ತಾಸು ನಿಮ್ಮದು ನಿದ್ದೆ?

ನಿದ್ದೆ ಮನುಷ್ಯನ ದೈಹಿಕ, ಮಾನಸಿಕ ಸದೃಢತೆಗೆ, ಆರೋಗ್ಯಕ್ಕೆ ಅವಶ್ಯಕ ಎನ್ನುವರು ವೈದ್ಯರು. ಇದರ ಜೊತೆಗೆ ನಿದ್ದೆ ಎಂಬುದು ಆತ್ಮದ ಆರೋಗ್ಯಕ್ಕೂ ಅತ್ಯವಶ್ಯ ಎನ್ನುವುದು ನಮ್ಮ ದೃಢವಾದ ನಂಬಿಕೆ.

ದಿನಕ್ಕೆ ನೀವೆಷ್ಟು ತಾಸು ಮಲಗುತ್ತೀರಿ ಎಂದು ಯಾರಾದರೂ ನಮ್ಮನ್ನು ಪ್ರಶ್ನಿಸಿದರೆ ನಾವು ಕೂಡಲೇ ಗಹಗಹಿಸಿ ನಕ್ಕುಬಿಡುತ್ತೇವೆ. ಅಸಂಬದ್ಧ ಪ್ರಶ್ನೆಯನ್ನು ಕೇಳಿ ಪೆಕರು ಪೆಕರಾಗಿ ಹಲ್ಲು ಕಿಸಿಯುವ ಅಡ್ಡಕಸುಬಿ ಜರ್ನಲಿಸ್ಟನ್ನು ಮುತ್ಸದ್ಧಿಯೊಬ್ಬ ಸಹನೆಯಿಂದ ನೋಡುವಂತೆ ಆತನನ್ನು ನೋಡುತ್ತಾ ಪಕ್ಕಕ್ಕೆ ಕರೆಯುತ್ತೇವೆ.

“ಮಗೂ ಉತ್ತರ ಸರಿಯಾಗಿರಬೇಕಾದರೆ ಸರಿಯಾಗಿ ಪ್ರಶ್ನಿಸುವುದನ್ನು ಕಲಿತುಕೋ. ನಿನ್ನ ಕಷ್ಟ ನಮಗೆ ಅರ್ಥವಾಗುತ್ತೆ. ಸಂಸತ್ತಿನಲ್ಲಿ ಸರಿಯಾದ ಪ್ರಶ್ನೆ ಕೇಳುವುದಕ್ಕೆ ಕಂತೆಗಟ್ಟಲೆ ನೋಟುಗಳನ್ನೇ ಚೆಲ್ಲಬೇಕು. ಹಿಂದೆ ಭಗತ್ ಸಿಂಗರು ಕರಪತ್ರಗಳನ್ನು ಚೆಲ್ಲಿದ್ದಂತೆ!

“ಎಷ್ಟು ತಾಸು ಮಲಗುತ್ತೀರಿ ಎಂದು ಕೇಳುವಾಗ. ರಾತ್ರಿಯಲ್ಲಿ ಎಷ್ಟು ತಾಸು ಮಲಗುತ್ತೀರಿ? ಹಗಲಲ್ಲಿ ಎಷ್ಟು ತಾಸು ಮಲಗುತ್ತೀರಿ ಎಂದು ನಿಖರವಾಗಿ ಪ್ರಶ್ನೆಗಳನ್ನು ರೂಪಿಸಬೇಕು.

“ರಾತ್ರಿ ಅಷ್ಟೂ ತಾಸು ಒಂದೇ ಮನೆಯಲ್ಲಿ, ಒಬ್ಬರ ಪಕ್ಕದಲ್ಲೇ ಮಲಗುತ್ತೀರೋ ಎಂದು ಹೆಚ್ಚುವರಿ ಪ್ರಶ್ನೆಯನ್ನು ಕೇಳುವ ಮುನ್ನ ಹೊಸ ಹಲ್ ಸೆಟ್ ಸ್ಪಾನ್ಸರ್ ಮಾಡುವ ಶಕ್ತಿ ನಿನ್ನ ಭಾವಿ ಮಾವನಿಗೆದೆಯೇ ತಿಳಿದುಕೊಳ್ಳಬೇಕು.

“ಹಗಲು ಎಷ್ಟು ತಾಸು, ಎಷ್ಟು ಬಾರಿ ಮಲಗುತ್ತೀರಿ ಎಂದು ಕೇಳಿದರಷ್ಟೇ ಸಾಲದು. ಸಿಟಿ ಬಸ್ಸಿನಲ್ಲಿ ಸೀಟ್ ಸಿಕ್ಕರೂ, ಸಿಗದಿದ್ದರೂ ಪಕ್ಕದವನೆ ಭುಜದ ಮೇಲೊರಗಿ ನಿದ್ದೆ ಮಾಡುವಿರಾ, ಎಷ್ಟು ಬಾರಿ ನಿಮ್ಮ ಪವಿತ್ರ ಲಾಲಾರಸವನ್ನುಕ್ಕಿಸಿ ಬಸ್ಸಿನ ಸೀಟುಗಳನ್ನು ಪುನೀತಗೊಳಿಸಿದ್ದೀರ, ಆಫೀಸಿನಲ್ಲಿ ಮೊದಲ ಫೈಲು ತೆರೆಯುತ್ತಿರುವಾಗ ನಿದ್ದೆಗೆ ಜಾರುವಿರೋ, ಮೊದಲ ಕಾಫಿಯಾದ ನಂತರವೋ, ಕ್ಸಾಸ್ ರೂಮುಗಳಲ್ಲಿ ಗದ್ದಕ್ಕೆ ಕೈ ಊರಿ ಸ್ವಪ್ನಲೋಕಕ್ಕೆ ತೆರಳುವಿರೋ ಇಲ್ಲ ಟೈಟ್ ಆದರೂ ಬ್ರೈಟ್ ಆದ ಕುಡುಕನ ಹಾಗೆ ತೂಕಡಿಕೆಸ್ತಂಭನ ಆಸನದಲ್ಲಿ ಪವಡಿಸುವಿರೋ, ಊಟವಾದ ನಂತರ ನಿದ್ದೆ ಮಾಡುವುದಕ್ಕೆ ಫ್ಯಾನ್ ಆವಶ್ಯಕವೇ? ಧ್ಯಾನದ ಯಾವ ಹಂತದ ನಂತರ ನಿದ್ರಾದೇವತೆಯ ಪ್ರವೇಶವಾಗುತ್ತದೆ? ಹೀಗೆ ಪ್ರಶ್ನಾವಳಿಯನ್ನು ರೂಪಿಸಬೇಕು.

“ಏಯ್! ಹುಡುಗ, ಎದ್ದೇಳೋ! ಏನೋ ಕೇಳ್ತಿದ್ದೆಯಲ್ಲೋ...”

3 comments:

  1. ಹಹಹಃ
    ಪ್ರಶ್ನೆಯನ್ನು ಹೀಗೂ ಕೇಳಬೇಕೆ?
    ನಿದ್ದೆ ಲೆಕ್ಕ ಇಡಲು ಸಾದ್ಯವೇ? ಎಷ್ಟು ತಾಸು ಎದ್ದಿರುತ್ತಿರ ಎಂದು ಕೇಳಿದರೆ ನಿಖರ ಉತ್ತರ ಸಿಗಬಹುದೇನೋ?

    ReplyDelete
  2. ನಿಜಾ ಗುರುಅವರು ಹೇಳಿದ ಹಾಗೆ ಪ್ರಶ್ನೆ ಮಾಡಿದರೆ .. ಎರಡೋ - ಮೂರೋ ಅಂತ ಸರಿಯಾದ ಲೆಕ್ಕ ಸಿಗಬಹುದು .

    ReplyDelete

ಕಾಫಿ ಕುಡೀತಾ ಹಂಗೇ ಒಂದಿಷ್ಟು ಮಾತಾಡಿ