Monday, September 28, 2009

ಎಷ್ಟು ತಾಸು ನಿಮ್ಮದು ನಿದ್ದೆ?

ನಿದ್ದೆ ಮನುಷ್ಯನ ದೈಹಿಕ, ಮಾನಸಿಕ ಸದೃಢತೆಗೆ, ಆರೋಗ್ಯಕ್ಕೆ ಅವಶ್ಯಕ ಎನ್ನುವರು ವೈದ್ಯರು. ಇದರ ಜೊತೆಗೆ ನಿದ್ದೆ ಎಂಬುದು ಆತ್ಮದ ಆರೋಗ್ಯಕ್ಕೂ ಅತ್ಯವಶ್ಯ ಎನ್ನುವುದು ನಮ್ಮ ದೃಢವಾದ ನಂಬಿಕೆ.

ದಿನಕ್ಕೆ ನೀವೆಷ್ಟು ತಾಸು ಮಲಗುತ್ತೀರಿ ಎಂದು ಯಾರಾದರೂ ನಮ್ಮನ್ನು ಪ್ರಶ್ನಿಸಿದರೆ ನಾವು ಕೂಡಲೇ ಗಹಗಹಿಸಿ ನಕ್ಕುಬಿಡುತ್ತೇವೆ. ಅಸಂಬದ್ಧ ಪ್ರಶ್ನೆಯನ್ನು ಕೇಳಿ ಪೆಕರು ಪೆಕರಾಗಿ ಹಲ್ಲು ಕಿಸಿಯುವ ಅಡ್ಡಕಸುಬಿ ಜರ್ನಲಿಸ್ಟನ್ನು ಮುತ್ಸದ್ಧಿಯೊಬ್ಬ ಸಹನೆಯಿಂದ ನೋಡುವಂತೆ ಆತನನ್ನು ನೋಡುತ್ತಾ ಪಕ್ಕಕ್ಕೆ ಕರೆಯುತ್ತೇವೆ.

“ಮಗೂ ಉತ್ತರ ಸರಿಯಾಗಿರಬೇಕಾದರೆ ಸರಿಯಾಗಿ ಪ್ರಶ್ನಿಸುವುದನ್ನು ಕಲಿತುಕೋ. ನಿನ್ನ ಕಷ್ಟ ನಮಗೆ ಅರ್ಥವಾಗುತ್ತೆ. ಸಂಸತ್ತಿನಲ್ಲಿ ಸರಿಯಾದ ಪ್ರಶ್ನೆ ಕೇಳುವುದಕ್ಕೆ ಕಂತೆಗಟ್ಟಲೆ ನೋಟುಗಳನ್ನೇ ಚೆಲ್ಲಬೇಕು. ಹಿಂದೆ ಭಗತ್ ಸಿಂಗರು ಕರಪತ್ರಗಳನ್ನು ಚೆಲ್ಲಿದ್ದಂತೆ!

“ಎಷ್ಟು ತಾಸು ಮಲಗುತ್ತೀರಿ ಎಂದು ಕೇಳುವಾಗ. ರಾತ್ರಿಯಲ್ಲಿ ಎಷ್ಟು ತಾಸು ಮಲಗುತ್ತೀರಿ? ಹಗಲಲ್ಲಿ ಎಷ್ಟು ತಾಸು ಮಲಗುತ್ತೀರಿ ಎಂದು ನಿಖರವಾಗಿ ಪ್ರಶ್ನೆಗಳನ್ನು ರೂಪಿಸಬೇಕು.

“ರಾತ್ರಿ ಅಷ್ಟೂ ತಾಸು ಒಂದೇ ಮನೆಯಲ್ಲಿ, ಒಬ್ಬರ ಪಕ್ಕದಲ್ಲೇ ಮಲಗುತ್ತೀರೋ ಎಂದು ಹೆಚ್ಚುವರಿ ಪ್ರಶ್ನೆಯನ್ನು ಕೇಳುವ ಮುನ್ನ ಹೊಸ ಹಲ್ ಸೆಟ್ ಸ್ಪಾನ್ಸರ್ ಮಾಡುವ ಶಕ್ತಿ ನಿನ್ನ ಭಾವಿ ಮಾವನಿಗೆದೆಯೇ ತಿಳಿದುಕೊಳ್ಳಬೇಕು.

“ಹಗಲು ಎಷ್ಟು ತಾಸು, ಎಷ್ಟು ಬಾರಿ ಮಲಗುತ್ತೀರಿ ಎಂದು ಕೇಳಿದರಷ್ಟೇ ಸಾಲದು. ಸಿಟಿ ಬಸ್ಸಿನಲ್ಲಿ ಸೀಟ್ ಸಿಕ್ಕರೂ, ಸಿಗದಿದ್ದರೂ ಪಕ್ಕದವನೆ ಭುಜದ ಮೇಲೊರಗಿ ನಿದ್ದೆ ಮಾಡುವಿರಾ, ಎಷ್ಟು ಬಾರಿ ನಿಮ್ಮ ಪವಿತ್ರ ಲಾಲಾರಸವನ್ನುಕ್ಕಿಸಿ ಬಸ್ಸಿನ ಸೀಟುಗಳನ್ನು ಪುನೀತಗೊಳಿಸಿದ್ದೀರ, ಆಫೀಸಿನಲ್ಲಿ ಮೊದಲ ಫೈಲು ತೆರೆಯುತ್ತಿರುವಾಗ ನಿದ್ದೆಗೆ ಜಾರುವಿರೋ, ಮೊದಲ ಕಾಫಿಯಾದ ನಂತರವೋ, ಕ್ಸಾಸ್ ರೂಮುಗಳಲ್ಲಿ ಗದ್ದಕ್ಕೆ ಕೈ ಊರಿ ಸ್ವಪ್ನಲೋಕಕ್ಕೆ ತೆರಳುವಿರೋ ಇಲ್ಲ ಟೈಟ್ ಆದರೂ ಬ್ರೈಟ್ ಆದ ಕುಡುಕನ ಹಾಗೆ ತೂಕಡಿಕೆಸ್ತಂಭನ ಆಸನದಲ್ಲಿ ಪವಡಿಸುವಿರೋ, ಊಟವಾದ ನಂತರ ನಿದ್ದೆ ಮಾಡುವುದಕ್ಕೆ ಫ್ಯಾನ್ ಆವಶ್ಯಕವೇ? ಧ್ಯಾನದ ಯಾವ ಹಂತದ ನಂತರ ನಿದ್ರಾದೇವತೆಯ ಪ್ರವೇಶವಾಗುತ್ತದೆ? ಹೀಗೆ ಪ್ರಶ್ನಾವಳಿಯನ್ನು ರೂಪಿಸಬೇಕು.

“ಏಯ್! ಹುಡುಗ, ಎದ್ದೇಳೋ! ಏನೋ ಕೇಳ್ತಿದ್ದೆಯಲ್ಲೋ...”

Saturday, September 26, 2009

ಗೇಟ್ಸ್ ಗೆ ಸಾಮ್ರಾಟರು ಬರೆದ ಪತ್ರ!

ಮಾನ್ಯ ಬಿಲ್ ಗೇಟ್ಸ್,

ನಮ್ಮನೇಗೆ ಒಂದು ಕಂಪ್ಯೂಟರ್ ತಗೊಂಡಿದ್ದು, ಅದರಲ್ಲಿ ಕೆಲ ಸಮಸ್ಯೆಗಳು ಉದ್ಭವಿಸಿದೆ. ಅದನ್ನು ನಿಮಗೆ ತಿಳಿಸಲು ಬಯಸುತ್ತೇನೆ.

೧. ನಿಮ್ಮ ಕಂಪ್ಯೂಟರ್ ಚೆನ್ನಾಗಿದೆ, ಆದರೆ ಅದರಲ್ಲಿ "ಸ್ಟಾರ್ಟ್" ಬಟನ್ ಇದೆ, "ಸ್ಟಾಪ್" ಬಟನ್ ಇಲ್ವೇ ಇಲ್ಲ. ಇದರ ಕುರಿತು ವಿಚಾರ ಮಾಡುವಂತೆ ನಿಮ್ಮಲ್ಲಿ ವಿನಂತಿ.

೨.ನಿಮ್ಮಲ್ಲಿ "ರಿ-ಸ್ಕೂಟರ್" ಸಿಗುತ್ತದಾ? ಕಂಪ್ಯೂಟರ್ ನಲ್ಲಿ "ರಿ-ಸೈಕಲ್" ಅಂತಿದೆ. ನನ್ನ ಬಳಿ ಸ್ಕೂಟರ್ ಇದೆ, ಸೈಕಲ್ ಇಲ್ಲ!

೩. ನನ್ನ ಮಗ ಪಿಂಟೂ ಗೆ ಈಗ ೬ ವರ್ಷ. ಮೊದಲು ನಿಮ್ಮ "ಮೈಕ್ರೋ ಸಾಫ್ಟ್ ವರ್ಡ್" ನೋಡ್ತಿದ್ದ, ಈಗ ಆತ "ಮೈಕ್ರೋ ಸಾಫ್ಟ್ ಸೆಂಟೆನ್ಸ್" ಬೇಕನ್ನುತ್ತಿದ್ದಾನೆ. ದಯವಿಟ್ಟು ಕೊಡ್ತೀರಾ?

೪. ನಿಮ್ಮ ವಿಂಡೋವ್ಸ್ ನಲ್ಲಿ "ಮೈ ಪಿಕ್ಚರ್ಸ್" ಅನ್ನುವ ಫೋಲ್ಡರ್ ಇದೆ. ಆದರೆ ಅದರಲ್ಲಿ ನನ್ನ ಒಂದೂ ಫೋಟೋ ಇಲ್ಲದಿರುವುದು ಬೇಸರ ತಂದಿದೆ. ಇದರತ್ತ ಕೊಂಚ ಗಮನ ಹರಿಸಿ.

೫. ನಾನು ಕಂಪ್ಯೂಟರ್ ಕೊಂಡುಕೊಂಡಿದ್ದು ಮನೆಯಲ್ಲಿ ಬಳಸುವುದಕ್ಕೆ. ನಿಮ್ಮ ಸಾಫ್ಟ್ ವೇರ್ "ಮೈಕ್ರೋ ಸಾಫ್ಟ್ ಆಫೀಸ್" ಅಂತಿದೆ. "ಮೈಕ್ರೋ ಸಾಫ್ಟ್ ಹೋಂ" ನ್ನು ದಯವಿಟ್ಟು ನನಗೆ ನೀಡಿ.

ಹಾಗೆ ಕೊನೆಯದಾಗಿ ಒಂದು ಅನುಮಾನವಿದೆ ಸರ್. ನಿಮ್ಮ ಹೆಸರು "ಗೇಟ್ಸ್" ಆದರೂ ನೀವ್ಯಾಕೆ "ವಿಂಡೋವ್ಸ್"ನ ಮಾರುತ್ತಿದ್ದೀರಿ?

(ಈ-ಮೈಲ್ ಬ್ಯೂರೋ ಮೂಲದಿಂದ)

--

Wednesday, September 23, 2009

ಸರಿ, ಮಕ್ಕಳೆಷ್ಟು!

ಮನೆಮನೆಗೆ ತೆರಳಿ ಜನಗಣತಿ ಮಾಡುವಾಕೆಗೆ ಆಕೆಯೊಬ್ಬಳು ಎದುರಾದಳು.

“ಮೇಡಂ ಜನಗಣತಿಗೆ ನಿಮ್ಮ ವಿವರವನ್ನು ಸೇರಿಸಿಕೊಳ್ಳಬೇಕಿತ್ತು.”

“ಏನು ಬೇಕಿತ್ತು ಕೇಳಿ...”

“ನಿಮ್ಮ ಹೆಸರು?”

“ಸಿಸ್ಟರ್ ಇಸಾಬೆಲ್”

“ಮದುವೆಯಾಗಿದೆಯಾ?”

ತುಸು ಯೋಚಿಸಿ ಆ ನನ್ ಉತ್ತರಿಸಿದಳು, “ಹು, ಜೀಸಸ್‌ನೊಂದಿಗೆ”

ಜನಗಣತಿಯಾಕೆ ಯಾಂತ್ರಿಕವಾಗಿ ಪ್ರಶ್ನಿಸಿದಳು, “ಸರಿ, ಎಷ್ಟು ಮಕ್ಕಳು?”

ಸಿಸ್ಟರ್ ಆಸ್ಪತ್ರೆಯ ಸಿಸ್ಟರ್‌ನ ಭೇಟಿ ಮಾಡುವವರೆಗೂ ಎಚ್ಚರವಾಗಲಿಲ್ಲ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕೆ?

Thursday, September 17, 2009

ನೀವೇ ಬದಲಿಸಿಕೊಳ್ಳಿ!

ಒಂದು ಹಡಗು ಸಮುದ್ರ ಮಧ್ಯದಲ್ಲಿ ಚಲಿಸುತ್ತಿದೆ. ಆ ದೇಶದ ರಾಜರು ಅದರಲ್ಲಿ ಪಯಣಿಸುತ್ತಿದ್ದಾರೆ. ಹಡಗು ಬಣ್ಣಬಣ್ಣದ ಲೈಟುಗಳಿಂದ ಮಿರಿಮಿರಿ ಮಿನುಗುತ್ತಿದೆ. ಆಗ ರಾತ್ರಿಯಾಗಿತ್ತು. ಹಡಗಿನ ಕ್ಯಾಪ್ಟನ್ ಗೆ ದೂರದಲ್ಲೊಂದು ಮಿಣುಕು ದೀಪ ಕಾಣಿಸುತ್ತದೆ. ಕೂಡಲೇ ಅದಕ್ಕೆ ಸಂದೇಶ ರವಾನಿಸುತ್ತಾನೆ. "ನಿಮ್ಮ ಹಡಗಿನ ದಿಕ್ಕನ್ನು ಬದಲಿಸಿಕೊಳ್ಳಿ.." ಅದಕ್ಕೆ ಉತ್ತರವಾಗಿ.."ಇಲ್ಲ, ನೀವೇ ದಿಕ್ಕನ್ನು ಬದಲಿಸಿಕೊಳ್ಳಬೇಕು." ಎಂದು ಬರುತ್ತದೆ.

ಕ್ಯಾಪ್ಟನ್ ಅಸಹನೆಯಿಂದ,"ಈ ದೇಶದ ರಾಜರೇ ಹಡಗಿನಲ್ಲಿದ್ದಾರೆ, ದಿಕ್ಕು ಬದಲಿಸಿಕೊಂದರೆ ಒಳ್ಳೆಯದು".

ಇದಕ್ಕೂ ಅತ್ತ ಕಡೆಯಿಂದ ಬರುವ ಉತ್ತರ, "ನಿಮಗೆ ಕಷ್ಟವಾಗಬಹುದು, ಆದರೆ ವಿಧಿಯಿಲ್ಲ, ನೀವೇ ದಿಕ್ಕನ್ನು ಬದಲಿಸಿಕೊಳ್ಳಿ!" ಎಂದೇ!

ಕೋಪಾವಿಷ್ಟನಾದ ಕ್ಯಾಪ್ಟನ್, ಕೂಡಲೇ ರಾಜರತ್ತ ಧಾವಿಸಿ ಇದೆಲ್ಲವ ವಿವರಿಸಿ, ಅವರ ಆಜ್ಞೆ ಪಡಕೊಳ್ಳುತ್ತಾನೆ, ನಂತರ "ನೀವು ದಿಕ್ಕನ್ನು ಬದಲಿಸಿಕೊಳ್ಳಲೇಬೇಕು, ಇದು ರಾಜನ ಆಜ್ಞೆ!" ಅಂತ ಕಳಿಸುತ್ತಾನೆ.
ಅತ್ತ ಕಡೆಯಿಂದ ಹೀಗೆ ಉತ್ತರ ಬರುತ್ತದೆ.

"ನೀವು ದಿಕ್ಕು ಬದಲಿಸಿಕೊಳ್ಳಲೇಬೇಕು, ಇದು ಲೈಟ್ ಹೌಸ್!"


(ಸಂಗ್ರಹದಿಂದ)