Showing posts with label ಕಾಫಿ ಹೀರಿ. Show all posts
Showing posts with label ಕಾಫಿ ಹೀರಿ. Show all posts

Wednesday, September 23, 2009

ಸರಿ, ಮಕ್ಕಳೆಷ್ಟು!

ಮನೆಮನೆಗೆ ತೆರಳಿ ಜನಗಣತಿ ಮಾಡುವಾಕೆಗೆ ಆಕೆಯೊಬ್ಬಳು ಎದುರಾದಳು.

“ಮೇಡಂ ಜನಗಣತಿಗೆ ನಿಮ್ಮ ವಿವರವನ್ನು ಸೇರಿಸಿಕೊಳ್ಳಬೇಕಿತ್ತು.”

“ಏನು ಬೇಕಿತ್ತು ಕೇಳಿ...”

“ನಿಮ್ಮ ಹೆಸರು?”

“ಸಿಸ್ಟರ್ ಇಸಾಬೆಲ್”

“ಮದುವೆಯಾಗಿದೆಯಾ?”

ತುಸು ಯೋಚಿಸಿ ಆ ನನ್ ಉತ್ತರಿಸಿದಳು, “ಹು, ಜೀಸಸ್‌ನೊಂದಿಗೆ”

ಜನಗಣತಿಯಾಕೆ ಯಾಂತ್ರಿಕವಾಗಿ ಪ್ರಶ್ನಿಸಿದಳು, “ಸರಿ, ಎಷ್ಟು ಮಕ್ಕಳು?”

ಸಿಸ್ಟರ್ ಆಸ್ಪತ್ರೆಯ ಸಿಸ್ಟರ್‌ನ ಭೇಟಿ ಮಾಡುವವರೆಗೂ ಎಚ್ಚರವಾಗಲಿಲ್ಲ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕೆ?

Thursday, April 2, 2009

ನೀವು ಓಟು ಹಾಕ್ತೀರಾ?

 

ಲೋಕಸಭೆಗೆ ಚುನಾವಣೆಗಳು ನಡೆಯುತ್ತಿವೆ. ಮನೆಯಲ್ಲಿ ಅಪ್ಪನಿಗೆ ರಾಜಕೀಯದ ಹುಚ್ಚು ಇದ್ದು ಬಿಟ್ಟರಂತೂ ಮುಗಿತೂ. ಅಪ್ಪನ ಪೇಪರು, ಟಿವಿ ನ್ಯೂಸ್ ಚಾನಲ್ಲುಗಳ ಮೂಲಕ ಮಕ್ಕಳಿಗೂ ಸಾಂಕ್ರಾಮಿಕವಾಗಿ ರಾಜಕೀಯದ ಹುಚ್ಚು ಹತ್ತಿ ಬಿಡುತ್ತದೆ. ಕ್ರಿಕೆಟ್ ಪ್ರೇಮ, ಧಾರಾವಾಹಿ ಮೋಹ, ರಾಜಕೀಯದ ಪ್ಯಾಶನ್ನು ಸಹ ಒಂದು ಜನರೇಶನ್ನಿನಿಂದ ಮತ್ತೊಂದಕ್ಕೆ ಬಳುವಳಿಯಾಗಿ ಬರುವ ಆಸ್ತಿಯಾಗಿದೆ.

ನಿಮಗೆ ಓಟು ಹಾಕುವ ಅರ್ಹತೆ ಬಂದಿದೆ ಎನ್ನುವುದಾದರೆ, ನಿಮಗೆ ಈಗಾಗಲೇ ಓಟು ಹಾಕಿರುವ ಅನುಭವವಿದೆಯೆನ್ನುವುದಾದರೆ ಇನ್ನೊಂದೆರಡು ನಿಮಿಷ ನಾವಿಲ್ಲಿ ಮಾತಾಡಬಹುದು. vote

ನಿಮ್ಮ ಮೊದಲ ಒಟು ಚಲಾವಣೆಯ ಅನುಭವ ಹೇಗಿತ್ತು ಎಂದು ಎಲ್ಲಾ ಪತ್ರಿಕೆಗಳು ಕೇಳುತ್ತವೆ. ಉತ್ತರ ಕೊಡಬೇಕಾದವರೆಲ್ಲರೂ ನಾನು ಯಾವ ಜಾತಿ ಅಭಿಮಾನವಿಲ್ಲದೆ, ಪಕ್ಷಪಾತವಿಲ್ಲದೆ, ಪೂರ್ವಾಗ್ರಹವಿಲ್ಲದೆ ಅಂತಃಸಾಕ್ಷಿ ಹೇಳಿದಂತೆ ಓಟು ಹಾಕಿದೆ ಎನ್ನುತ್ತಾರೆ. ಆದರೆ ಪ್ರತಿ ಸಲದ ಚುನಾವಣೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳ ಇತಿಹಾಸ ಹಾಗೂ ಸಾಧನೆ ಗಮನಿಸಿದರೆ ಮತ ಚಲಾಯಿಸಿದವರ ‘ಅಂತಃಸಾಕ್ಷಿ’ಯ ಬಗೆಗೇ ಸಂಶಯ ಹುಟ್ಟುತ್ತದೆ.

ಅದೇನೇ ಇರಲಿ, ನಮ್ ಕಾಫಿ ಕ್ಲಬ್ಬಲ್ಲಿ ಕಾಫಿ ಘಮದ ಜೊತೆಗೆ ಚುನಾವಣೆ ಬಿಸಿಯನ್ನೂ ಸೇರಿಸೋಣ ಎನ್ನುವ ಆಲೋಚನೆ ನಮ್ಮದು. ಜೊತೆಗೆ  ಬೇಸಿಗೆ ಬೇರೆ ಮೆಲ್ಲಗೆ ಶುರುವಾಗುತ್ತಿದೆ. ಬಿಸಿ ಅಧಿಕವಾದರೆ ತಿಳಿಸಿ, ಸಾಸರು ಬಳಸಿ.

ನೀವು ಓಟು ಹಾಕುವುದು ಪಕ್ಷವನ್ನು ನೋಡಿಯೋ ಅಥವಾ ನಿಮ್ಮ ಮತಕ್ಷೇತ್ರದ ಅಭ್ಯರ್ಥಿಯ ಸಾಧನೆಯ ಬಗ್ಗೆ ತಿಳಿದುಕೊಂಡೋ? ಮತ ಹಾಕುವುದು ಪಕ್ಷದ ಹೆಸರು ನೋಡಿ ಎನ್ನುವುದಾದರೆ ಆ ಪಕ್ಷದ ಬಗೆಗಿನ ಅಭಿಮಾನ ನಿಮಗೆ ಬೆಳೆದದ್ದು ಹೇಗೆ ಎಂದೂ ತಿಳಿಸಿ. ಏಕೆಂದರೆ ಒಂದೇ ಮನೆಯಲ್ಲಿ ನಾಲ್ಕು ಮಂದಿ ಓಟು ಹಾಕುವವರಿದ್ದರೆ ಬಹುತೇಕ ಎಲ್ಲರೂ ಒಂದೇ ಪಕ್ಷಕ್ಕೆ ಹಾಕುವ ಪದ್ಧತಿ ಇರುತ್ತೆ. ಇನ್ನು ನಿಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ನಿಂತ ಅಭ್ಯರ್ಥಿಗಳ ಬಗ್ಗೆ ನಿಮಗೇನು ಗೊತ್ತಿರುತ್ತೆ? ಅವರ ಬಗ್ಗೆ ತಿಳಿಯುವ ಪ್ರಯತ್ನವನ್ನು ಮಾಡುತ್ತೀರಾ?

ಹದವಾದ ಬಿಸಿಯ ಕಾಫಿಯ ಜೊತೆ ಲೋಕಾಭಿರಾಮದ ಈ ಹರಟೆಗೆ ಸ್ವಾಗತ...

Saturday, January 31, 2009

ಇದು ಕಾಫಿ ಕ್ಲಬ್


ಇದು ಕಾಫಿ ಕ್ಲಬ್!

ಕಾಫಿ ಗಿಡವನ್ನು ಬೆಳೆಸಿ ಕಾಫಿ ಬೀಜ ಪುಡಿ ಮಾಡಿ, ಕಬ್ಬನ್ನು ಹಿರಿದು ಸಕ್ಕರೆ ಮಾಡಿ, ಹಸುವನ್ನು ಸಾಕಿ ಹಾಲ್ಕರೆದು ಕಾಫಿ ಮಾಡುವ ಕಷ್ಟ ನೀವು ತೆಗೆದುಕೊಳ್ಳಬೇಕಿಲ್ಲ. ಕಪ್ಪು-ಸಾಸರ್ ಹೊಂದಿಸುವ, ತೊಳೆದಿಡುವ ರಗಳೆ ನಿಮಗಿಲ್ಲಿ ಇಲ್ಲ. ಇಲ್ಲಿ ಎಲ್ಲವೂ ಸಿದ್ಧವಿರುತ್ತೆ, ಬಂದು ಇಲ್ಲಿನ ಕಾಫಿ ಹೀರುತ್ತಾ ನಾಲ್ಕು ಘಳಿಗೆ ಕಳೆದು ಹೋದರೆ ಸಾಕು, ಕ್ಲಬ್ಬು ಪಾವನವಾಗುತ್ತೆ.

ವಿಪರೀತ ವೈಚಾರಿಕತೆಯನ್ನ, ನಿಮ್ಮ ಸಾಮಾಜಿಕ ಜವಾಬ್ದಾರಿಗಳನ್ನ, ಸಂವೇದನೆ- ಸಾದಾ ವೇದನೆಗಳನ್ನ ಇಲ್ಲಿ ಕ್ಲಬ್‌ನ ಎದುರಲ್ಲಿರುವ ಚಪ್ಪಲಿ ಸ್ಟ್ಯಾಂಡ್ ಬಳಿಯಲ್ಲೇ ಬಿಟ್ಟು ಒಳಬನ್ನಿ. ನಿಮ್ಮ ಹಮ್ಮು, ಬಿಮ್ಮು, ಸಿಟ್ಟು - ಸೆಡವು, ಪೂರ್ವಾಗ್ರಹಗಳಿಗೆಲ್ಲಾ ನೀವೇ ಜವಾಬ್ದಾರರು. ಕಾಫಿ ಕಪ್ಪುಗಳಲ್ಲಿ ದಯವಿಟ್ಟು ಕೈ ತೊಳೆಯಬೇಡಿ. ವೇಯಟರಿಗೆ ಟಿಪ್ಸ್ ಕೊಡುವುದ ಮರೆಯಬೇಡಿ.

ಬಿಸಿ ಬಿಸಿ ಕಾಫಿಯ ಹಬೆಯೇರುತಿದೆ. ಬನ್ನಿ ಒಂದೊಂದು ಕಪ್ ಹೀರಿ...