Wednesday, November 4, 2009

ಮೀಸೆ ಬಿಟ್ಟ ಗಂಡಸಿಗೆ ಡಿಮ್ಯಾಂಡಪ್ಪ ಡಿಮ್ಯಾಂಡು!


ಮೀಸೆಯಿದ್ದ ಗಂಡಸಿಗೆ ಡಿಮ್ಯಾಂಡಪ್ಪ ಡಿಮ್ಯಾಂಡು ಎಂದು ಕಾಶಿನಾಥ್ ತಮ್ಮ ಮೀಸೆ ಬೋಳಿಸುವ ಎಷ್ಟೋ ವರ್ಷಗಳ ಮೊದಲೇ ಹಾಡಿ ಕುಣಿದಾಗಿದೆ. ಹೆಣ್ಣಿಗೆ ಹಣೆಯಲ್ಲಿ ಬೊಟ್ಟು ಭೂಷಣ, ಗಂಡಿಗೆ ಮೂಗಿನ ಕೆಳಗೆ ಮೀಸೆ (ಮತ್ತೆಲ್ಲಿರುತ್ತೆ ಎನ್ನಬೇಡಿ!) ಭೂಷಣ.

ಕನ್ನಡದ ಸಿನೆಮಾವೊಂದರ ಐಟೆಮ್ ಸಾಂಗಿನಲ್ಲಿ ನಟಿಸಿ ಹೋಗಲು ಬಂದಿದ್ದ ಬಾಲಿವುಡ್ ತಾರೆಯೊಬ್ಬಳು ದಕ್ಷಿಣ ಭಾರತದ ಗಂಡಸರೇಕೆ ಮೀಸೆ ಬಿಡುತ್ತಾರೆ ಎಂದು ಕೇಳಿದ್ದಕ್ಕೆ ಪಕ್ಕದಲ್ಲಿದ್ದವರ್ಯಾರೋ, “ಅವರು ಗಂಡಸರಲ್ವಾ ಮೇಡಂ ಅದಕ್ಕೆ..” ಎಂದು ತಮ್ಮ ಬೋಳು ಮೀಸೆ(ಇಂಥದ್ದೂ ಇರುತ್ಯೆ?)ಯನ್ನು ಮುಚ್ಚಿಕೊಂಡರಂತೆ!

ತಲೆಯಲ್ಲಿ ಕೂದಲು ಬೆಳೆಸುವಷ್ಟು ಗೊಬ್ಬರ ಒಳಗಿಲ್ಲ ಎಂಬ ಹಮ್ಮು ಇರುವ ಶಶಿರರು (ಚಂದ್ರ(ಶಶಿ)ನಂತೆ ಗುಂಡಗಿರುವ ಶಿರವನ್ನು ಹೊಂದಿರುವವರು) ಸಹ ಮೂಗಿನ ಕೆಳಗೆ ಹುಲ್ಲುಗಾವಲಿಗೆ ಪ್ರೋತ್ಸಾಹ ನೀಡುವುದು ಮಜವಾಗಿರುತ್ತದೆ.

ಎಂತಹ ರಿಸೆಶನ್, ನಿರುದ್ಯೋಗದ ದಿನಗಳಲ್ಲೂ ಸಹ ಕೆಲಸ ಕಳೆದುಕೊಳ್ಳದ ಕೆಲವು ಸಂಶೋಧಕರು ನಡೆಸಿದ ಲೇಟೆಸ್ಟ್ ಸಂಶೋಧನೆಯ ಪ್ರಕಾರ ಈ ನಿಧಾನಗತಿಯ ಆರ್ಥಿಕತೆಯಲ್ಲಿ ಮೀಸೆಯಿರುವ ಗಂಡಸರು ಮೀಸೆಯಿಲ್ಲದ ಗಂಡಸರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ ಸಂಪಾದಿಸುತ್ತಾರಂತೆ. ಶೇವ್ ಮಾಡುವುದಕ್ಕೆ ಮಾಡುವ ಖರ್ಚಿನಲ್ಲಿನ ಉಳಿತಾಯವೊಂದೇ ಇದಕ್ಕೆ ಕಾರಣವಲ್ಲವಂತೆ, ಮೀಸೆ ವ್ಯಕ್ತಿಯಲ್ಲಿ ಇಲ್ಲದ ಗಾಂಭೀರ್ಯವನ್ನು, ಜವಾಬ್ದಾರಿಯನ್ನು ಬಿಂಬಿಸುವುದಂತೆ. ಮೀಸೆ ಹೊತ್ತ ಗಂಡಸರು ಸಂದರ್ಶನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ವಿಯಾಗುವರಂತೆ.

ಸಂವಹನ ಕಲೆಯನ್ನು, ತಾಂತ್ರಿಕ ಪರಿಣತಿಯನ್ನು, ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಲು ತಮ್ಮ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದ ಪ್ಲೇಸ್ ಮೆಂಟ್ ಆಫೀಸುಗಳು ಇನ್ನು ಮುಂದೆ ಎಲ್ಲದರ ಜೊತೆಗೆ ಮೀಸೆಯನ್ನೂ ಬೆಳೆಸಿ ಎಂದುಪದೇಶಿಸುವುದರಲ್ಲಿ ಸಂಶಯವಿಲ್ಲ!