Thursday, December 3, 2009

ಒಂದು ಗೇರ್ ಹಾಕೋಕೆ, ಮತ್ತೊಂದು ಬ್ರೇಕ್ ಹಾಕೋಕೆ!

ಡಾಕ್ಟರ್ : ನೀವು ಯಾವ ಸೋಪ್ ಬಳಸುವುದು?

ಸಾಮ್ರಾಟ್ : ನಾನು ಗೋಪಾಲ್ ಸೋಪ್. ಹಲ್ಲುಜ್ಜಲು ಕೂಡ ಗೋಪಾಲ್ ಟೂತ್ ಪೇಸ್ಟ್, ಗೋಪಾಲ್ ಬ್ರಶ್!

ಡಾಕ್ಟರ್ : ಈ "ಗೋಪಾಲ್" ಅಂದ್ರೆ ಇಂಟರ್ನ್ಯಾಶನಲ್ ಕಂಪನಿನಾ?

ಸಾಮ್ರಾಟ್ : ಅಲ್ಲ ಅಲ್ಲ.. ಗೋಪಾಲ್ ನನ್ನ ರೂಮ್ ಮೇಟ್!

************

ಅವತ್ತು ಸಾಮ್ರಾಟರು ಫುಲ್ ಟೈಟ್...

ಇನ್ನು ನಡೆಯಲು ಆಗಲ್ಲ ಅನ್ನಿಸಲು ಶುರುವಾದಾಗ ಅಲ್ಲೇ ನಿಂತಿದ್ದ ಟ್ಯಾಕ್ಸಿ ಹತ್ತಿ ಕೂತು..." ಏರ್ ಪೋರ್ಟ್ ಗೆ ಹೊರಡಪ್ಪಾ.." ಅಂದರು.

ಟ್ಯಾಕ್ಸಿಯವನು "ಸ್ವಾಮೀ.. ನೀವು ಏರ್ ಪೋರ್ಟಿನಲ್ಲೇ ಇದೀರಿ!"
ಅಂದ.

ಸಾಮ್ರಾಟರು ಜೇಬಿನಿಂದ ಒಂದೈವತ್ತು ರೂಪಾಯಿ ತೆಗೆದು ಅವನಿಗಿತ್ತು,.." ತಗೋಳಪ್ಪಾ.. ಆದ್ರೆ ಇನ್ಮೇಲೆ ಇಷ್ಟ್ ಫಾಸ್ಟ್ ಆಗಿ ಕಾರ್ ಓಡಿಸ್ಬೇಡ!" ಅಂದರು.

******

ಸಾಮ್ರಾಟ್ ಮನೆಯಲ್ಲಿ ಅಂದು ಪ್ಲಗ್ ನಿಂದ ಹೊಗೆ ಬರ್ತಿತ್ತು.

ಸಿಟ್ಟು ತೀರಾ ನೆತ್ತಿಗೇರಿ ಕೆ.ಪಿ.ಟಿ.ಸಿ.ಎಲ್ ಗೆ ಫೋನ್ ಮಾಡಿ..."ಯಾರ್ರೀ ಅದು ಆಫೀಸಿನಲ್ಲಿ ಸಿಗರೇಟ್ ಸೇದಿ, ನಮ್ಮನೆ ಪ್ಲಗ್ ನಲ್ಲಿ ಬಿಡ್ತಾ ಇರೋದು?!" ಅಂತ ಬೈದರು!

*****

ಇದು ಸಾಮ್ರಾಟರು ಹೆಣ್ಣು ನೋಡಲು ಹೋದಾಗ ನಡೆದಿದ್ದು.

ಒಂದೇ ಲುಕ್ಕಿನಲ್ಲಿ ಸಾಮ್ರಾಟರ ಬದುಕನ್ನಿಡೀ ಅಳೆದ ಹುಡುಗಿಯ ಅಪ್ಪ, " ನನ್ನ ಮಗಳನ್ನು ಅವಳ ಬಾಳ ತುಂಬಾ ಒಬ್ಬ ಈಡಿಯಟ್ ಜತೆ ಇರಿಸಿಸೋದಕ್ಕೆ ನಂಗೆ ಇಷ್ಟ ಇಲ್ಲ!" ಅಂದುಬಿಟ್ಟರು.

ಸಾಮ್ರಾಟರು ಕೂಲ್ ಆಗಿ, " ಇದೇ ಕಾರಣಕ್ಕಾಗಿ ನಾನು ನಿಮ್ಮ ಮಗಳನ್ನು ಮದುವೆಗಾಗಿ ಕೇಳೋಕೆ ಬಂದಿರುವುದು!" ಎಂದರು.

*******

ಸಾಮ್ರಾಟರು ರಿಸೆಶನ್ ನಿಂದ ನರಳುತಿರುವಾಗಲೇ ಮಗ ಜಿಂಗ್ ಜಾಂಗ್ ಆಗಿ ಸಮಸ್ಯೆಯ ಪರಿತಾಪವೇ ಇಲ್ಲದೇ ಓಡಾಡುತ್ತಿದ್ದ. ಅದಾದರೆ ಹೋಗಲಿ, ವಯಸ್ಸು, ಆಡಿಕೊಳ್ಳಲಿ ಅಂತ ಸುಮ್ಮನಿರಬಹುದಿತ್ತು.
ಇಂಥಾ ಟೈಮಿನಲ್ಲಿ ಮಗ "ನಂಗೊಂದು ಬೈಕ್ ಕೊಡಿಸು" ಅಂತ ದುಂಬಾಲು ಬಿದ್ದ.

ಸಾಮ್ರಾಟರ ಪಿತ್ತ ನೆತ್ತಿಗೇರಿ, " ದೇವ್ರು ನಿಂಗೆ ೨ ಕಾಲ್ ಕೊಟ್ಟಿರೋದು ಯಾತಕ್ಕೆ?!" ಅಂತ ಕೇಳಿದರೆ ಮಗ "ಒಂದು ಗೇರ್ ಹಾಕೋಕೆ, ಮತ್ತೊಂದು ಬ್ರೇಕ್ ಹಾಕೋಕೆ!" ಅಂದುಬಿಡೋದೇ?!

******

(ಸಂಗ್ರಹ)

Wednesday, November 4, 2009

ಮೀಸೆ ಬಿಟ್ಟ ಗಂಡಸಿಗೆ ಡಿಮ್ಯಾಂಡಪ್ಪ ಡಿಮ್ಯಾಂಡು!


ಮೀಸೆಯಿದ್ದ ಗಂಡಸಿಗೆ ಡಿಮ್ಯಾಂಡಪ್ಪ ಡಿಮ್ಯಾಂಡು ಎಂದು ಕಾಶಿನಾಥ್ ತಮ್ಮ ಮೀಸೆ ಬೋಳಿಸುವ ಎಷ್ಟೋ ವರ್ಷಗಳ ಮೊದಲೇ ಹಾಡಿ ಕುಣಿದಾಗಿದೆ. ಹೆಣ್ಣಿಗೆ ಹಣೆಯಲ್ಲಿ ಬೊಟ್ಟು ಭೂಷಣ, ಗಂಡಿಗೆ ಮೂಗಿನ ಕೆಳಗೆ ಮೀಸೆ (ಮತ್ತೆಲ್ಲಿರುತ್ತೆ ಎನ್ನಬೇಡಿ!) ಭೂಷಣ.

ಕನ್ನಡದ ಸಿನೆಮಾವೊಂದರ ಐಟೆಮ್ ಸಾಂಗಿನಲ್ಲಿ ನಟಿಸಿ ಹೋಗಲು ಬಂದಿದ್ದ ಬಾಲಿವುಡ್ ತಾರೆಯೊಬ್ಬಳು ದಕ್ಷಿಣ ಭಾರತದ ಗಂಡಸರೇಕೆ ಮೀಸೆ ಬಿಡುತ್ತಾರೆ ಎಂದು ಕೇಳಿದ್ದಕ್ಕೆ ಪಕ್ಕದಲ್ಲಿದ್ದವರ್ಯಾರೋ, “ಅವರು ಗಂಡಸರಲ್ವಾ ಮೇಡಂ ಅದಕ್ಕೆ..” ಎಂದು ತಮ್ಮ ಬೋಳು ಮೀಸೆ(ಇಂಥದ್ದೂ ಇರುತ್ಯೆ?)ಯನ್ನು ಮುಚ್ಚಿಕೊಂಡರಂತೆ!

ತಲೆಯಲ್ಲಿ ಕೂದಲು ಬೆಳೆಸುವಷ್ಟು ಗೊಬ್ಬರ ಒಳಗಿಲ್ಲ ಎಂಬ ಹಮ್ಮು ಇರುವ ಶಶಿರರು (ಚಂದ್ರ(ಶಶಿ)ನಂತೆ ಗುಂಡಗಿರುವ ಶಿರವನ್ನು ಹೊಂದಿರುವವರು) ಸಹ ಮೂಗಿನ ಕೆಳಗೆ ಹುಲ್ಲುಗಾವಲಿಗೆ ಪ್ರೋತ್ಸಾಹ ನೀಡುವುದು ಮಜವಾಗಿರುತ್ತದೆ.

ಎಂತಹ ರಿಸೆಶನ್, ನಿರುದ್ಯೋಗದ ದಿನಗಳಲ್ಲೂ ಸಹ ಕೆಲಸ ಕಳೆದುಕೊಳ್ಳದ ಕೆಲವು ಸಂಶೋಧಕರು ನಡೆಸಿದ ಲೇಟೆಸ್ಟ್ ಸಂಶೋಧನೆಯ ಪ್ರಕಾರ ಈ ನಿಧಾನಗತಿಯ ಆರ್ಥಿಕತೆಯಲ್ಲಿ ಮೀಸೆಯಿರುವ ಗಂಡಸರು ಮೀಸೆಯಿಲ್ಲದ ಗಂಡಸರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ ಸಂಪಾದಿಸುತ್ತಾರಂತೆ. ಶೇವ್ ಮಾಡುವುದಕ್ಕೆ ಮಾಡುವ ಖರ್ಚಿನಲ್ಲಿನ ಉಳಿತಾಯವೊಂದೇ ಇದಕ್ಕೆ ಕಾರಣವಲ್ಲವಂತೆ, ಮೀಸೆ ವ್ಯಕ್ತಿಯಲ್ಲಿ ಇಲ್ಲದ ಗಾಂಭೀರ್ಯವನ್ನು, ಜವಾಬ್ದಾರಿಯನ್ನು ಬಿಂಬಿಸುವುದಂತೆ. ಮೀಸೆ ಹೊತ್ತ ಗಂಡಸರು ಸಂದರ್ಶನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ವಿಯಾಗುವರಂತೆ.

ಸಂವಹನ ಕಲೆಯನ್ನು, ತಾಂತ್ರಿಕ ಪರಿಣತಿಯನ್ನು, ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಲು ತಮ್ಮ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದ ಪ್ಲೇಸ್ ಮೆಂಟ್ ಆಫೀಸುಗಳು ಇನ್ನು ಮುಂದೆ ಎಲ್ಲದರ ಜೊತೆಗೆ ಮೀಸೆಯನ್ನೂ ಬೆಳೆಸಿ ಎಂದುಪದೇಶಿಸುವುದರಲ್ಲಿ ಸಂಶಯವಿಲ್ಲ!

Saturday, October 31, 2009

ನಕ್ಕರೆ ಜೋಕೇ ; ನಗದಿದ್ರೆ ಜೋಕೆ !

ರಾ.ಶಿ. ಕನ್ನಡದ ಹಾಸ್ಯಸಾಹಿತ್ಯದಲ್ಲಿ ಮರೆಯಲಾಗದ ಹೆಸರು. ಬರೀ ಬರವಣಿಗೆ ಅಲ್ಲದೇ ನಿಜ ಜೀವನದಲ್ಲೂ ಹಾಸ್ಯದಿಂದ ಮಾತಾಡುವವರು. ಅವರ ಭಾಷಣ, ಮಾತು ಎಲ್ಲದರಲ್ಲೂ ಹಾಸ್ಯ ಲಾಸ್ಯವಾಡುತ್ತಿತ್ತು.

ಒಮ್ಮೆ ಅವರ ಧರ್ಮಪತ್ನಿ ತವರಿಗೆ ಹೊರಟಾಗ ಅಡುಗೆಮನೆಯ ಉಸ್ತುವಾರಿಯನ್ನು ರಾ.ಶಿ.ಯವರಿಗೆ ನೀಡಲು ಅನುಮಾನಿಸುತ್ತಿದ್ದರು. ಆಗ ರಾ.ಶಿ.ಯವರು ಸಮಯಪ್ರಜ್ಞೆಯಿಂದ, " ನೀನೇನೂ ಯೋಚ್ನೆ ಮಾಡಬೇಡ. ನಾನೂ ಹೆಣ್ಣು ಮಕ್ಕಳೂ ಅಡುಗೆ ಮಾಡ್ಕೋತೀವಿ. ಕೂದಲು ಯಾವಾಗ ಹಾಕಬೇಕು ಅನ್ನೋದನ್ನ ಮಾತ್ರ ಹೇಳಿಬಿಟ್ಟು ಹೋಗು!" ಅಂತ ಹೇಳಿ ಮನೆಯವರೆಲ್ಲರಲ್ಲಿ ನಗೆಯುಕ್ಕಿಸಿದ್ದರು.

*******


ಇತ್ತೀಚೆಗೆ ಸಾಮ್ರಾಟರು ಅಮೇರಿಕೆಗೆ ಹೋಗಿದ್ದು ಎಲ್ಲರಿಗೂ ತಿಳಿದೇ ಇದೆ. ಇಲ್ಲಿ ಮನುಷ್ಯನ ತಲೆಯನ್ನೂ ಸೇರಿದಂತೆ ಒಂದನ್ನೂ ಬಿಡದೇ ತಿನ್ನುವವರಾದರೂ ಒಮ್ಮೆಯಾದರೂ ಅಮೇರಿಕನ್ ಕೋಳಿ ತಿನ್ನುವ ಚಪಲ, ಆಸೆ ಹೆಚ್ಚಾಯಿತು. ಹೋಟೆಲ್ ಗೇನೋ ಹೋದರು, ಆದರೆ ಕೋಳಿಗೆ ಇಂಗ್ಲೀಶ್ ನಲ್ಲಿ ಏನನ್ನುವರು ಅನ್ನೋದೇ ಮರೆತುಹೋಯಿತವರಿಗೆ. ಪೇಚಿಗಿಟ್ಟುಕೊಂಡಿದ್ದರೂ

ಕೊನೆಗೊಂದು ಐಡ್ಯಾ ಮಾಡ್ಯಾರು. ಅವರು ಹೇಳಿದ್ದು ಹೀಗಿದೆ:

"ಗಿವ್ ಮಿ ಎಗ್ಸ್ ಮದರ್!"

******

ಅವತ್ತು ಟ್ರೈನ್ ಒಂದು ಸ್ಟೇಷನ್ ನಲ್ಲಿ ನಿಲ್ಲುತ್ತದೆ.

ಸಾಮ್ರಾಟರು ಪಿಳಿಪಿಳಿ ಹೊರಗೆ ನೋಡುತ್ತಿದ್ದುದು ಬಿಟ್ಟರೆ ಏನೂ ಗೊತ್ತಾಗುತ್ತಿದ್ದಿಲ್ಲ. ಮೊದಲ ಬಾರಿಯ ಅಮೇರಿಕ ಪಯಣ ಅಲ್ಲವೇ. ಆದರೆ ಈ ವಿಷಯ ಪಕ್ಕದ ಪಯಣಿಗರಿಗೆ ಹ್ಯಾಗೆ ಗೊತ್ತಾಗಬೇಕು?

ಪಕ್ಕದಲ್ಲಿ ಕೂತ ಪುಣ್ಯಾತ್ಮ " ಇದು ಯಾವ ಸ್ಟೇಷನ್?" ಅಂತ ಕೇಳಿದ.

ಸ್ವಲ್ಪ ಹೊತ್ತು ಹೊರಗೆ ನೋಡಿ ಗಾಢವಾದ ಆಲೋಚನೆ ನಂತರ "ರೈಲ್ವೇ ಸ್ಟೇಷನ್!" ಅಂದರು.

********

( ಸಂಗ್ರಹ )

Monday, September 28, 2009

ಎಷ್ಟು ತಾಸು ನಿಮ್ಮದು ನಿದ್ದೆ?

ನಿದ್ದೆ ಮನುಷ್ಯನ ದೈಹಿಕ, ಮಾನಸಿಕ ಸದೃಢತೆಗೆ, ಆರೋಗ್ಯಕ್ಕೆ ಅವಶ್ಯಕ ಎನ್ನುವರು ವೈದ್ಯರು. ಇದರ ಜೊತೆಗೆ ನಿದ್ದೆ ಎಂಬುದು ಆತ್ಮದ ಆರೋಗ್ಯಕ್ಕೂ ಅತ್ಯವಶ್ಯ ಎನ್ನುವುದು ನಮ್ಮ ದೃಢವಾದ ನಂಬಿಕೆ.

ದಿನಕ್ಕೆ ನೀವೆಷ್ಟು ತಾಸು ಮಲಗುತ್ತೀರಿ ಎಂದು ಯಾರಾದರೂ ನಮ್ಮನ್ನು ಪ್ರಶ್ನಿಸಿದರೆ ನಾವು ಕೂಡಲೇ ಗಹಗಹಿಸಿ ನಕ್ಕುಬಿಡುತ್ತೇವೆ. ಅಸಂಬದ್ಧ ಪ್ರಶ್ನೆಯನ್ನು ಕೇಳಿ ಪೆಕರು ಪೆಕರಾಗಿ ಹಲ್ಲು ಕಿಸಿಯುವ ಅಡ್ಡಕಸುಬಿ ಜರ್ನಲಿಸ್ಟನ್ನು ಮುತ್ಸದ್ಧಿಯೊಬ್ಬ ಸಹನೆಯಿಂದ ನೋಡುವಂತೆ ಆತನನ್ನು ನೋಡುತ್ತಾ ಪಕ್ಕಕ್ಕೆ ಕರೆಯುತ್ತೇವೆ.

“ಮಗೂ ಉತ್ತರ ಸರಿಯಾಗಿರಬೇಕಾದರೆ ಸರಿಯಾಗಿ ಪ್ರಶ್ನಿಸುವುದನ್ನು ಕಲಿತುಕೋ. ನಿನ್ನ ಕಷ್ಟ ನಮಗೆ ಅರ್ಥವಾಗುತ್ತೆ. ಸಂಸತ್ತಿನಲ್ಲಿ ಸರಿಯಾದ ಪ್ರಶ್ನೆ ಕೇಳುವುದಕ್ಕೆ ಕಂತೆಗಟ್ಟಲೆ ನೋಟುಗಳನ್ನೇ ಚೆಲ್ಲಬೇಕು. ಹಿಂದೆ ಭಗತ್ ಸಿಂಗರು ಕರಪತ್ರಗಳನ್ನು ಚೆಲ್ಲಿದ್ದಂತೆ!

“ಎಷ್ಟು ತಾಸು ಮಲಗುತ್ತೀರಿ ಎಂದು ಕೇಳುವಾಗ. ರಾತ್ರಿಯಲ್ಲಿ ಎಷ್ಟು ತಾಸು ಮಲಗುತ್ತೀರಿ? ಹಗಲಲ್ಲಿ ಎಷ್ಟು ತಾಸು ಮಲಗುತ್ತೀರಿ ಎಂದು ನಿಖರವಾಗಿ ಪ್ರಶ್ನೆಗಳನ್ನು ರೂಪಿಸಬೇಕು.

“ರಾತ್ರಿ ಅಷ್ಟೂ ತಾಸು ಒಂದೇ ಮನೆಯಲ್ಲಿ, ಒಬ್ಬರ ಪಕ್ಕದಲ್ಲೇ ಮಲಗುತ್ತೀರೋ ಎಂದು ಹೆಚ್ಚುವರಿ ಪ್ರಶ್ನೆಯನ್ನು ಕೇಳುವ ಮುನ್ನ ಹೊಸ ಹಲ್ ಸೆಟ್ ಸ್ಪಾನ್ಸರ್ ಮಾಡುವ ಶಕ್ತಿ ನಿನ್ನ ಭಾವಿ ಮಾವನಿಗೆದೆಯೇ ತಿಳಿದುಕೊಳ್ಳಬೇಕು.

“ಹಗಲು ಎಷ್ಟು ತಾಸು, ಎಷ್ಟು ಬಾರಿ ಮಲಗುತ್ತೀರಿ ಎಂದು ಕೇಳಿದರಷ್ಟೇ ಸಾಲದು. ಸಿಟಿ ಬಸ್ಸಿನಲ್ಲಿ ಸೀಟ್ ಸಿಕ್ಕರೂ, ಸಿಗದಿದ್ದರೂ ಪಕ್ಕದವನೆ ಭುಜದ ಮೇಲೊರಗಿ ನಿದ್ದೆ ಮಾಡುವಿರಾ, ಎಷ್ಟು ಬಾರಿ ನಿಮ್ಮ ಪವಿತ್ರ ಲಾಲಾರಸವನ್ನುಕ್ಕಿಸಿ ಬಸ್ಸಿನ ಸೀಟುಗಳನ್ನು ಪುನೀತಗೊಳಿಸಿದ್ದೀರ, ಆಫೀಸಿನಲ್ಲಿ ಮೊದಲ ಫೈಲು ತೆರೆಯುತ್ತಿರುವಾಗ ನಿದ್ದೆಗೆ ಜಾರುವಿರೋ, ಮೊದಲ ಕಾಫಿಯಾದ ನಂತರವೋ, ಕ್ಸಾಸ್ ರೂಮುಗಳಲ್ಲಿ ಗದ್ದಕ್ಕೆ ಕೈ ಊರಿ ಸ್ವಪ್ನಲೋಕಕ್ಕೆ ತೆರಳುವಿರೋ ಇಲ್ಲ ಟೈಟ್ ಆದರೂ ಬ್ರೈಟ್ ಆದ ಕುಡುಕನ ಹಾಗೆ ತೂಕಡಿಕೆಸ್ತಂಭನ ಆಸನದಲ್ಲಿ ಪವಡಿಸುವಿರೋ, ಊಟವಾದ ನಂತರ ನಿದ್ದೆ ಮಾಡುವುದಕ್ಕೆ ಫ್ಯಾನ್ ಆವಶ್ಯಕವೇ? ಧ್ಯಾನದ ಯಾವ ಹಂತದ ನಂತರ ನಿದ್ರಾದೇವತೆಯ ಪ್ರವೇಶವಾಗುತ್ತದೆ? ಹೀಗೆ ಪ್ರಶ್ನಾವಳಿಯನ್ನು ರೂಪಿಸಬೇಕು.

“ಏಯ್! ಹುಡುಗ, ಎದ್ದೇಳೋ! ಏನೋ ಕೇಳ್ತಿದ್ದೆಯಲ್ಲೋ...”

Saturday, September 26, 2009

ಗೇಟ್ಸ್ ಗೆ ಸಾಮ್ರಾಟರು ಬರೆದ ಪತ್ರ!

ಮಾನ್ಯ ಬಿಲ್ ಗೇಟ್ಸ್,

ನಮ್ಮನೇಗೆ ಒಂದು ಕಂಪ್ಯೂಟರ್ ತಗೊಂಡಿದ್ದು, ಅದರಲ್ಲಿ ಕೆಲ ಸಮಸ್ಯೆಗಳು ಉದ್ಭವಿಸಿದೆ. ಅದನ್ನು ನಿಮಗೆ ತಿಳಿಸಲು ಬಯಸುತ್ತೇನೆ.

೧. ನಿಮ್ಮ ಕಂಪ್ಯೂಟರ್ ಚೆನ್ನಾಗಿದೆ, ಆದರೆ ಅದರಲ್ಲಿ "ಸ್ಟಾರ್ಟ್" ಬಟನ್ ಇದೆ, "ಸ್ಟಾಪ್" ಬಟನ್ ಇಲ್ವೇ ಇಲ್ಲ. ಇದರ ಕುರಿತು ವಿಚಾರ ಮಾಡುವಂತೆ ನಿಮ್ಮಲ್ಲಿ ವಿನಂತಿ.

೨.ನಿಮ್ಮಲ್ಲಿ "ರಿ-ಸ್ಕೂಟರ್" ಸಿಗುತ್ತದಾ? ಕಂಪ್ಯೂಟರ್ ನಲ್ಲಿ "ರಿ-ಸೈಕಲ್" ಅಂತಿದೆ. ನನ್ನ ಬಳಿ ಸ್ಕೂಟರ್ ಇದೆ, ಸೈಕಲ್ ಇಲ್ಲ!

೩. ನನ್ನ ಮಗ ಪಿಂಟೂ ಗೆ ಈಗ ೬ ವರ್ಷ. ಮೊದಲು ನಿಮ್ಮ "ಮೈಕ್ರೋ ಸಾಫ್ಟ್ ವರ್ಡ್" ನೋಡ್ತಿದ್ದ, ಈಗ ಆತ "ಮೈಕ್ರೋ ಸಾಫ್ಟ್ ಸೆಂಟೆನ್ಸ್" ಬೇಕನ್ನುತ್ತಿದ್ದಾನೆ. ದಯವಿಟ್ಟು ಕೊಡ್ತೀರಾ?

೪. ನಿಮ್ಮ ವಿಂಡೋವ್ಸ್ ನಲ್ಲಿ "ಮೈ ಪಿಕ್ಚರ್ಸ್" ಅನ್ನುವ ಫೋಲ್ಡರ್ ಇದೆ. ಆದರೆ ಅದರಲ್ಲಿ ನನ್ನ ಒಂದೂ ಫೋಟೋ ಇಲ್ಲದಿರುವುದು ಬೇಸರ ತಂದಿದೆ. ಇದರತ್ತ ಕೊಂಚ ಗಮನ ಹರಿಸಿ.

೫. ನಾನು ಕಂಪ್ಯೂಟರ್ ಕೊಂಡುಕೊಂಡಿದ್ದು ಮನೆಯಲ್ಲಿ ಬಳಸುವುದಕ್ಕೆ. ನಿಮ್ಮ ಸಾಫ್ಟ್ ವೇರ್ "ಮೈಕ್ರೋ ಸಾಫ್ಟ್ ಆಫೀಸ್" ಅಂತಿದೆ. "ಮೈಕ್ರೋ ಸಾಫ್ಟ್ ಹೋಂ" ನ್ನು ದಯವಿಟ್ಟು ನನಗೆ ನೀಡಿ.

ಹಾಗೆ ಕೊನೆಯದಾಗಿ ಒಂದು ಅನುಮಾನವಿದೆ ಸರ್. ನಿಮ್ಮ ಹೆಸರು "ಗೇಟ್ಸ್" ಆದರೂ ನೀವ್ಯಾಕೆ "ವಿಂಡೋವ್ಸ್"ನ ಮಾರುತ್ತಿದ್ದೀರಿ?

(ಈ-ಮೈಲ್ ಬ್ಯೂರೋ ಮೂಲದಿಂದ)

--

Wednesday, September 23, 2009

ಸರಿ, ಮಕ್ಕಳೆಷ್ಟು!

ಮನೆಮನೆಗೆ ತೆರಳಿ ಜನಗಣತಿ ಮಾಡುವಾಕೆಗೆ ಆಕೆಯೊಬ್ಬಳು ಎದುರಾದಳು.

“ಮೇಡಂ ಜನಗಣತಿಗೆ ನಿಮ್ಮ ವಿವರವನ್ನು ಸೇರಿಸಿಕೊಳ್ಳಬೇಕಿತ್ತು.”

“ಏನು ಬೇಕಿತ್ತು ಕೇಳಿ...”

“ನಿಮ್ಮ ಹೆಸರು?”

“ಸಿಸ್ಟರ್ ಇಸಾಬೆಲ್”

“ಮದುವೆಯಾಗಿದೆಯಾ?”

ತುಸು ಯೋಚಿಸಿ ಆ ನನ್ ಉತ್ತರಿಸಿದಳು, “ಹು, ಜೀಸಸ್‌ನೊಂದಿಗೆ”

ಜನಗಣತಿಯಾಕೆ ಯಾಂತ್ರಿಕವಾಗಿ ಪ್ರಶ್ನಿಸಿದಳು, “ಸರಿ, ಎಷ್ಟು ಮಕ್ಕಳು?”

ಸಿಸ್ಟರ್ ಆಸ್ಪತ್ರೆಯ ಸಿಸ್ಟರ್‌ನ ಭೇಟಿ ಮಾಡುವವರೆಗೂ ಎಚ್ಚರವಾಗಲಿಲ್ಲ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕೆ?

Thursday, September 17, 2009

ನೀವೇ ಬದಲಿಸಿಕೊಳ್ಳಿ!

ಒಂದು ಹಡಗು ಸಮುದ್ರ ಮಧ್ಯದಲ್ಲಿ ಚಲಿಸುತ್ತಿದೆ. ಆ ದೇಶದ ರಾಜರು ಅದರಲ್ಲಿ ಪಯಣಿಸುತ್ತಿದ್ದಾರೆ. ಹಡಗು ಬಣ್ಣಬಣ್ಣದ ಲೈಟುಗಳಿಂದ ಮಿರಿಮಿರಿ ಮಿನುಗುತ್ತಿದೆ. ಆಗ ರಾತ್ರಿಯಾಗಿತ್ತು. ಹಡಗಿನ ಕ್ಯಾಪ್ಟನ್ ಗೆ ದೂರದಲ್ಲೊಂದು ಮಿಣುಕು ದೀಪ ಕಾಣಿಸುತ್ತದೆ. ಕೂಡಲೇ ಅದಕ್ಕೆ ಸಂದೇಶ ರವಾನಿಸುತ್ತಾನೆ. "ನಿಮ್ಮ ಹಡಗಿನ ದಿಕ್ಕನ್ನು ಬದಲಿಸಿಕೊಳ್ಳಿ.." ಅದಕ್ಕೆ ಉತ್ತರವಾಗಿ.."ಇಲ್ಲ, ನೀವೇ ದಿಕ್ಕನ್ನು ಬದಲಿಸಿಕೊಳ್ಳಬೇಕು." ಎಂದು ಬರುತ್ತದೆ.

ಕ್ಯಾಪ್ಟನ್ ಅಸಹನೆಯಿಂದ,"ಈ ದೇಶದ ರಾಜರೇ ಹಡಗಿನಲ್ಲಿದ್ದಾರೆ, ದಿಕ್ಕು ಬದಲಿಸಿಕೊಂದರೆ ಒಳ್ಳೆಯದು".

ಇದಕ್ಕೂ ಅತ್ತ ಕಡೆಯಿಂದ ಬರುವ ಉತ್ತರ, "ನಿಮಗೆ ಕಷ್ಟವಾಗಬಹುದು, ಆದರೆ ವಿಧಿಯಿಲ್ಲ, ನೀವೇ ದಿಕ್ಕನ್ನು ಬದಲಿಸಿಕೊಳ್ಳಿ!" ಎಂದೇ!

ಕೋಪಾವಿಷ್ಟನಾದ ಕ್ಯಾಪ್ಟನ್, ಕೂಡಲೇ ರಾಜರತ್ತ ಧಾವಿಸಿ ಇದೆಲ್ಲವ ವಿವರಿಸಿ, ಅವರ ಆಜ್ಞೆ ಪಡಕೊಳ್ಳುತ್ತಾನೆ, ನಂತರ "ನೀವು ದಿಕ್ಕನ್ನು ಬದಲಿಸಿಕೊಳ್ಳಲೇಬೇಕು, ಇದು ರಾಜನ ಆಜ್ಞೆ!" ಅಂತ ಕಳಿಸುತ್ತಾನೆ.
ಅತ್ತ ಕಡೆಯಿಂದ ಹೀಗೆ ಉತ್ತರ ಬರುತ್ತದೆ.

"ನೀವು ದಿಕ್ಕು ಬದಲಿಸಿಕೊಳ್ಳಲೇಬೇಕು, ಇದು ಲೈಟ್ ಹೌಸ್!"


(ಸಂಗ್ರಹದಿಂದ)

Saturday, May 9, 2009

ನೀವು ನಕ್ಕರೆ.. ಕಾಫಿಗೆ ಬೇಡ ಸಕ್ಕರೆ!

ನಗೆಸಾಮ್ರಾಟರು ಹೆಂಡತಿಗೆ ಫೋನ್ ಮಾಡಿದರು,"ಇವತ್ತು ಮನೆಗೆ ಬರಲಿಕ್ಕೆ ಆಗಲ್ಲ, ಕಾರಿನ ಗೇರ್, ಸ್ಟೀರಿಂಗ್ ಎಲ್ಲಾ ಕಳವಾಗಿದೆ.." ಎಂದು.

ಆದರೆ ಐದು ನಿಮಿಷದ ಬಳಿಕ ಮತ್ತೆ ಫೋನ್ ಮಾಡಿ.."ಬರ್ತಿದ್ದೇನೆ, ಮೊದಲು ಮಿಸ್ಸಾಗಿ ಕಾರಿನ ಹಿಂದಿನ ಸೀಟ್ ನಲ್ಲಿ ಕುಳಿತುಬಿಟ್ಟಿದ್ದೆ.." ಅಂದರು.

******


ಸರ್: ಯಾಕ್ಲೇ ಗುಂಡಾ..ಮುಂದ ಇನ್ ಶರ್ಟ್ ಮಾಡಿ ಹಿಂದಾ ಹೊರಗಾ ಬಿಟ್ಟಿದೀಯಲ್ಲಾ?

ಗುಂಡ: "ಮುಂದ ಅಂಗಿ ಹರ್ದೆತ್ರಿ... ಹಿಂದ ಪ್ಯಾಂಟ್ ಹರ್ದೆತ್ರಿ.. ಅದಕ್ಕೆ ರಿ ಸರ..."


*****

ರಿಸೆಷನ್ ಟೈಮ್ ನಲ್ಲಿ ಕಂಪನಿಯೊಂದು ಬಳಸಬಹುದಾದ ತಂತ್ರ.
ಟಿಶ್ಯೂ ಪೇಪರ್ ನ ಬದಲು ಹೊಸತಾಗಿ ಕಾಲೇಜು ಮುಗಿಸಿದವರು ಕೆಲಸಕ್ಕಾಗಿ ನೀಡಿದ ರೆಸ್ಯೂಮ್ ಬಳಸುವುದು!


*********

ನಗೆಸಾಮ್ರಾಟರು ಸಲೂನ್ ಗೆ ಹೋದಾಗ ನಡೆದ ಘಟನೆ.
ಅಲ್ಲಿಗೆ ಒಬ್ಬ ನೋಡಲು ಒಂದು ಆಂಗಲ್ ನಲ್ಲಿ ಗಾಂಧಿಯಂತೆ ಕಾಣುತ್ತಿದ್ದ ವ್ಯಕ್ತಿ ಬಂದ ತಲೆಯಲ್ಲಿ ಯಾವ ಕಡೆಯಿಂದ ಕೂಡಿಸಿದರೂ ಒಂಭತ್ತಕ್ಕಿಂತ ಹೆಚ್ಚು ಕೂದಲು ಕಾಣ್ತಿಲ್ಲ. ಅವನ ತಲೆ ನೋಡಿ ಸಿಟ್ಟಾದ ಸಲೂನಿನ ಬಿಲ್ಲು, " ಏನ್ಸಾರ್ ಕೌಂಟ್ ಮಾಡಲಾ? ಕಟ್ ಮಾಡಲಾ?" ಎಂದು ಕೇಳಿದ್ದಕ್ಕೆ

ಆ ವ್ಯಕ್ತಿ ವಿನಮ್ರತೆಯಿಂದ.."ಕಲರ್ ಮಾಡು.." ಅಂದ!
ನೋಡಿ ಸಾಮ್ರಾಟರು ಸುಸ್ತು.


******


ಸಾಮ್ರಾಟರ ಮಗನಿಗೆ ಶಾಲೆಯಲಿ ರೇಸ್ ಬಗ್ಗೆ ಬರೆಯಲು ಹೇಳಿದ್ದರು. ಅದನ್ನು ಒಂಚೂರೂ ಎಡಿಟ್ ಮಾಡದೇ ಇಲ್ಲಿ ನೀಡುತ್ತಿದ್ದೇವೆ.
"ಅದು ಇರುವೆಗಳ ಸೈಕಲ್ ರೇಸು. ಕುಂದಾಪುರದಿಂದ ಶುರುವಾದ ರೇಸು ಮುಗಿಯುವುದು ಉಡುಪಿಯಲಿ. ಒಂದು ಇರುವೆಯು ಇಲ್ಲದ ಗೇರನ್ನು ಕಲ್ಪಿಸಿಕೊಳ್ಳುತ್ತ ಸೈಕಲ್ ನ್ನು ಪಲ್ಸಾರ್ ತರಹ ಓಡಿಸುತ್ತಿತ್ತು. ಆಗ ಅಲ್ಲಿಗೆ ಸೈಟ್ ಸೀಯಿಂಗ್ ಗೆ ಬಂದ ಆನೆ ದಾರಿಗಡ್ಡವಾದಾಗ ಸಡನ್ನಾಗಿ ಬ್ರೇಕ್ ಹಾಕಿದ ಇರುವೆಯು .." ಅಡಿಕ್ ಬೂರ್ದು ಸೈಪನ ಮರೆ..!" (ಅಡಿಗೆ ಬಿದ್ದು ಸಾಯ್ತೀಯ ಮಾರಾಯ) ಅಂದಿತು.

ಮಗನ ಕಲ್ಪನೆಗಳ ಬಗ್ಗೆ ಹೆಮ್ಮೆ ಪಟ್ಟ ಸಾಮ್ರಾಟರು ಎಲ್ಲೆಡೆ ಹೇಳಿಕೊಂಡು ತಿರುಗುತ್ತಿದ್ದರೆ, ಮಗರಾಯ ’ಅಪ್ಪ ಹೀಗೆ ಹೇಳ್ತಾ ಇದ್ದರೆ ಆನೆ ಮರ್ಯಾದೆ ಏನಾಗಬೇಕಂತ’ ಆಲೋಚಿಸಿ ಆನೆಯನ್ನೇ ಹೀರೋ ಆಗಿಸಿ ಏನೋ ಬರೆಯುತ್ತಿದ್ದಾನಂತೆ!

*****

ಈ ಸಲ ಇಂಕ್ರಿಮೆಂಟು ನೀಡದ್ದಕ್ಕೆ ಸಿಟ್ಟಾದ ನಗೆಸಾಮ್ರಾಟರು ತನ್ನ ಬಾಸ್ ಗೆ ಧಮಕಿ ಹಾಕಿದ್ದು ಹೇಗೆ ಗೊತ್ತೆ?
" ಈ ತಿಂಗಳು ನನ್ನ ಸಂಬಳ ಹೆಚ್ಚು ಮಾಡದಿದ್ದರೆ, ಆಫೀಸಿನ ಎಲ್ಲರಿಗೂ ನೀವು ನನಗೆ ಇಂಕ್ರಿಮೆಂಟ್ ಕೊಟ್ಟಿರೆಂದು ಸುದ್ಧಿ ಹಬ್ಬಿಸುತ್ತೇನೆ..!"

*****

ಕಳೆದ ಸಲ ನಗೆ ಸಾಮ್ರಾಟರು ಅಮೇರಿಕಾಗೆ ಹೋಗಿದ್ದಾಗ ಅಲ್ಲೊಂದು ಮೆಶೀನ್ ನೋಡಿದರು. ಅದು ಕಳ್ಳರನ್ನು ಹಿಡಿವ ಯಂತ್ರವಾಗಿತ್ತು. ಅಲ್ಲೇ ಸಾಕ್ಷಾತ್ ಅವರ ಕಣ್ಣೆದುರೇ ಘಂಟೆ ೧೦ ಲೆಕ್ಕದಲ್ಲಿ ಕಳ್ಳರನ್ನು ಹಿಡಿಯಿತು. ಖುಷ್ ಆದ ಸಾಮ್ರಾಟರು ಭಾರಿ ಮೊತ್ತ ತೆತ್ತು ಕರ್ನಾಟಕದ ಪೋಲೀಸರಿಗೆ ತೋರಿಸುತ್ತೇನೆ ಅಂತ ಹೇಳಿಕೊಳ್ಳುತ್ತಿದ್ದರು.

ಆದರೆ ಇಲ್ಲಿ ಇಟ್ಟ ಮಾರನೇ ದಿನವೇ ಮೆಶೀನ್ ಕಳುವಾಯಿತಂತೆ.

*****

ಭೀಮನು ಧುರ್ಯೋದನನನ್ನು ಹೇಗೆ ಕೊಂದನು?
ಒಂದು ಮಾರ್ಕ್ಸಿನ ಪ್ರಶ್ನೆಯಾದರೆ ಸಾಮ್ರಾಟರ ಮಗ ಅಷ್ಟು ತಲೆತುರಿಸಿಕೊಳ್ಳುತ್ತಿರಲಿಲ್ಲ. ಅಷ್ಟು ದಡ್ಡನೆಂದು ತಿಳಿದಿರೇ? ಆ ಪ್ರಶ್ನೆ ೧೫ ಅಂಕಕ್ಕೆ ಕೇಳಲ್ಪಟ್ಟಿತ್ತು. ಆಗ್ಲೇ ಮೇಷ್ಟ್ರು ತುಂಬಾ ಸಲ ಹೇಳಿದ್ದರು ಹದಿನೈದು ಮಾರ್ಕ್ಸಿನ ಪ್ರಶ್ನೆಗೆ ಉತ್ತರಿಸುವಾಗ ಕೊನೆಯ ಪಕ್ಷ ಒಂದು ಪುಟವಾದರೂ ಬರೆಯಲೇಬೇಕೆಂದು. ಪ್ರಶ್ನೆ ಕೇಳುವವರಿಗೆ ಕಾಮನ್ ಸೆನ್ಸ್ ಬೇಡವೇ ಅಂತ ಬಯ್ದುಕೊಳ್ಳುತ್ತಾ ಕೊನೆಗೆ ಒಂದು ಉಪಾಯ ಕಂಡುಕೊಂಡ.

"ಭೀಮನು ಧುರ್ಯೋಧನನನ್ನು ಗುದ್ದಿ ಗುದ್ದಿ ಗುದ್ದಿ ಗುದ್ದಿ....." ಹೀಗೆ ಬರೆಯುತ್ತಾ ಪುಟದ ಕೊನೆಗೆ ".... ಗುದ್ದಿ ಕೊಂದನು." ಹೀಗೆ ಮುಗಿಸಿದ!


-
(ಕೋಳಿಯನ್ನು( ನಗೆಸಾಮ್ರಾಟರನ್ನು) ಕೇಳದೇ ಅಲ್ಲಿ ಇಲ್ಲಿ ಮಾಡಿದ ಸಂಗ್ರಹಕ್ಕೆ ಮಸಾಲೆ ಅರೆದದ್ದು ರಂಜಿತ್.)

Thursday, April 2, 2009

ನೀವು ಓಟು ಹಾಕ್ತೀರಾ?

 

ಲೋಕಸಭೆಗೆ ಚುನಾವಣೆಗಳು ನಡೆಯುತ್ತಿವೆ. ಮನೆಯಲ್ಲಿ ಅಪ್ಪನಿಗೆ ರಾಜಕೀಯದ ಹುಚ್ಚು ಇದ್ದು ಬಿಟ್ಟರಂತೂ ಮುಗಿತೂ. ಅಪ್ಪನ ಪೇಪರು, ಟಿವಿ ನ್ಯೂಸ್ ಚಾನಲ್ಲುಗಳ ಮೂಲಕ ಮಕ್ಕಳಿಗೂ ಸಾಂಕ್ರಾಮಿಕವಾಗಿ ರಾಜಕೀಯದ ಹುಚ್ಚು ಹತ್ತಿ ಬಿಡುತ್ತದೆ. ಕ್ರಿಕೆಟ್ ಪ್ರೇಮ, ಧಾರಾವಾಹಿ ಮೋಹ, ರಾಜಕೀಯದ ಪ್ಯಾಶನ್ನು ಸಹ ಒಂದು ಜನರೇಶನ್ನಿನಿಂದ ಮತ್ತೊಂದಕ್ಕೆ ಬಳುವಳಿಯಾಗಿ ಬರುವ ಆಸ್ತಿಯಾಗಿದೆ.

ನಿಮಗೆ ಓಟು ಹಾಕುವ ಅರ್ಹತೆ ಬಂದಿದೆ ಎನ್ನುವುದಾದರೆ, ನಿಮಗೆ ಈಗಾಗಲೇ ಓಟು ಹಾಕಿರುವ ಅನುಭವವಿದೆಯೆನ್ನುವುದಾದರೆ ಇನ್ನೊಂದೆರಡು ನಿಮಿಷ ನಾವಿಲ್ಲಿ ಮಾತಾಡಬಹುದು. vote

ನಿಮ್ಮ ಮೊದಲ ಒಟು ಚಲಾವಣೆಯ ಅನುಭವ ಹೇಗಿತ್ತು ಎಂದು ಎಲ್ಲಾ ಪತ್ರಿಕೆಗಳು ಕೇಳುತ್ತವೆ. ಉತ್ತರ ಕೊಡಬೇಕಾದವರೆಲ್ಲರೂ ನಾನು ಯಾವ ಜಾತಿ ಅಭಿಮಾನವಿಲ್ಲದೆ, ಪಕ್ಷಪಾತವಿಲ್ಲದೆ, ಪೂರ್ವಾಗ್ರಹವಿಲ್ಲದೆ ಅಂತಃಸಾಕ್ಷಿ ಹೇಳಿದಂತೆ ಓಟು ಹಾಕಿದೆ ಎನ್ನುತ್ತಾರೆ. ಆದರೆ ಪ್ರತಿ ಸಲದ ಚುನಾವಣೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳ ಇತಿಹಾಸ ಹಾಗೂ ಸಾಧನೆ ಗಮನಿಸಿದರೆ ಮತ ಚಲಾಯಿಸಿದವರ ‘ಅಂತಃಸಾಕ್ಷಿ’ಯ ಬಗೆಗೇ ಸಂಶಯ ಹುಟ್ಟುತ್ತದೆ.

ಅದೇನೇ ಇರಲಿ, ನಮ್ ಕಾಫಿ ಕ್ಲಬ್ಬಲ್ಲಿ ಕಾಫಿ ಘಮದ ಜೊತೆಗೆ ಚುನಾವಣೆ ಬಿಸಿಯನ್ನೂ ಸೇರಿಸೋಣ ಎನ್ನುವ ಆಲೋಚನೆ ನಮ್ಮದು. ಜೊತೆಗೆ  ಬೇಸಿಗೆ ಬೇರೆ ಮೆಲ್ಲಗೆ ಶುರುವಾಗುತ್ತಿದೆ. ಬಿಸಿ ಅಧಿಕವಾದರೆ ತಿಳಿಸಿ, ಸಾಸರು ಬಳಸಿ.

ನೀವು ಓಟು ಹಾಕುವುದು ಪಕ್ಷವನ್ನು ನೋಡಿಯೋ ಅಥವಾ ನಿಮ್ಮ ಮತಕ್ಷೇತ್ರದ ಅಭ್ಯರ್ಥಿಯ ಸಾಧನೆಯ ಬಗ್ಗೆ ತಿಳಿದುಕೊಂಡೋ? ಮತ ಹಾಕುವುದು ಪಕ್ಷದ ಹೆಸರು ನೋಡಿ ಎನ್ನುವುದಾದರೆ ಆ ಪಕ್ಷದ ಬಗೆಗಿನ ಅಭಿಮಾನ ನಿಮಗೆ ಬೆಳೆದದ್ದು ಹೇಗೆ ಎಂದೂ ತಿಳಿಸಿ. ಏಕೆಂದರೆ ಒಂದೇ ಮನೆಯಲ್ಲಿ ನಾಲ್ಕು ಮಂದಿ ಓಟು ಹಾಕುವವರಿದ್ದರೆ ಬಹುತೇಕ ಎಲ್ಲರೂ ಒಂದೇ ಪಕ್ಷಕ್ಕೆ ಹಾಕುವ ಪದ್ಧತಿ ಇರುತ್ತೆ. ಇನ್ನು ನಿಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ನಿಂತ ಅಭ್ಯರ್ಥಿಗಳ ಬಗ್ಗೆ ನಿಮಗೇನು ಗೊತ್ತಿರುತ್ತೆ? ಅವರ ಬಗ್ಗೆ ತಿಳಿಯುವ ಪ್ರಯತ್ನವನ್ನು ಮಾಡುತ್ತೀರಾ?

ಹದವಾದ ಬಿಸಿಯ ಕಾಫಿಯ ಜೊತೆ ಲೋಕಾಭಿರಾಮದ ಈ ಹರಟೆಗೆ ಸ್ವಾಗತ...

Wednesday, April 1, 2009

ಕಾಫಿ ಕ್ಲಬ್ಬಿಗೆ ಬೀಗ

 

ವ್ಯಾಲಂಟೈನ್ ಡೇ ಸಂದರ್ಭದಲ್ಲಿ ನಾಡಿನ ಪ್ರಮುಖ ಸಂಘಟನೆಯ ವಿರುದ್ಧ ಕೆಲವು ಅವಹೇಳನಕಾರಿ ಪ್ರತಿಕ್ರಿಯೆಗಳನ್ನು, ಹೇಳಿಕೆಗಳನ್ನು ಪ್ರಕಟಿಸಿದ್ದೇವೆ ಎಂಬ ಕಾರಣಕ್ಕೆ ‘ಕಾಫಿ ಕ್ಲಬ್’ನ ಮೇಲೆ ಆ ಸಂಘಟನೆಯ ಕಣ್ಣು ಬಿದ್ದಿತ್ತು. ನಮ್ಮ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸುವ ಸಂಬಂಧ ಆ ಸಂಘಟನೆ ನಡೆಸುತ್ತಿದ್ದ ಪ್ರಯತ್ನಗಳನ್ನು ಇಷ್ಟು ದಿನ ನಾವು ಮೌನವಾಗಿ ಗಮನಿಸುತ್ತಿದ್ದೆವು. ಹೀಗಾಗಿ ಕ್ಲಬ್ಬಲ್ಲಿ ಹೆಚ್ಚಿನ ಚರ್ಚೆ ನಡೆದಿರಲಿಲ್ಲ.

ಈಗ ನ್ಯಾಯಾಲಯದಲ್ಲಿ ಕೇಸು ಕಡೆಯ ಹಂತಕ್ಕೆ ಬಂದಿದೆ. ಒಂದು ಜವಾಬ್ದಾರಿಯುತ ಸಂಘಟನೆಯ ಬಗ್ಗೆ, ಗೌರವಯುತ ಸಂಘಟಕನ ಬಗ್ಗೆ ಅವಹೇಳನಕಾರಿಯಾಗಿ ಬ್ಲಾಗಿನಲ್ಲಿ ಬರೆದದ್ದು ತಪ್ಪೆಂದು ನ್ಯಾಯಾಲಯ ತೀರ್ಪಿತ್ತಿದೆ. ತತ್ಸಂಬಂಧ ಈ ಬ್ಲಾಗಿನ ಮಾಲೀಕರನ್ನು, ಬರಹಗಾರರನ್ನೂ ವಾಗ್ದಂಡನೆಗೆ ಗುರಿ ಮಾಡಿ, ಅವರಿಂದ ಬೇಷರತ್ ಕ್ಷಮೆಯನ್ನು ಪಡೆಯುವ, ಬ್ಲಾಗನ್ನು ಮುಚ್ಚುವ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಲಾಗಿದೆ.

ಈ ಕಡೆಯ ಪೋಸ್ಟಿನಲ್ಲಿ, ಈ ಬ್ಲಾಗಿನ ಮಾಲೀಕನಾದ ನಾನು ಸುಪ್ರೀತ್.ಕೆ.ಎಸ್ ಆ ಸಂಘಟನೆಯ ಹಾಗೂ ಅದರ ಮುಖಂಡರ ಕ್ಷಮೆಯಾಚಿಸುವೆ. ಇನ್ನು ಮುಂದೆ ಇಂತಹ ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದು ಮುಚ್ಚಳಿಕೆ ನೀಡುವೆ.

ವಿ.ಸೂ: ಈ ಬ್ಲಾಗಿನಲ್ಲಿ ಇನ್ನು ಮುಂದೆ ಯಾವುದೇ ಬರಹ ಪ್ರಕಟವಾಗೋದಿಲ್ಲ.

Wednesday, February 25, 2009

ಬ್ಲಾಗ್ ಯಾಕೆ ಬರೆಯಬೇಕು?

ರವಿ ಬೆಳೆಗೆರೆ, ಜೋಗಿ ಬಗ್ಗೆ ಬರೆಯುತ್ತ ನಯಾಪೈಸೆ ಲಾಭವಿಲ್ಲದ ಬ್ಲಾಗೂ ನಡೆಸುತ್ತಾನೆ ಎಂದು ಬರೆದಿದ್ದರು. ವಿಶ್ವೆಶ್ವರ ಭಟ್ಟರೂ ಬ್ಲಾಗಿಗೆ ಬರೆಯುವುದು ಸಮಯ ಹಾಳು ಎಂಬಂಥ ಕಾಮೆಂಟ್ ಮಾಡಿದ್ದನ್ನು ಓದಿದ ನೆನಪು. ಅಲ್ಲಿ-ಇಲ್ಲಿ ಪ್ರಕಟವಾಗಿದ್ದನ್ನು ಬ್ಲಾಗಿಗೆ ಹಾಕುವುದರಲ್ಲಿ ಏನೂ ನಷ್ಟವಿಲ್ಲವಾದರೂ ಬ್ಲಾಗಿಗಾಗೇ ಬರೆಯುವುದು ಪ್ರಯೋಜನವಿಲ್ಲದ್ದಾ ಎಂಬ ಗೊಂದಲ ಹಲವು ಬಾರಿ ಮನದಲ್ಲಿ ಮೂಡುತ್ತಿತ್ತು. ಬ್ಲಾಗಿಲ್ಲದೇ ಹೋದರೆ ನಮ್ಮ ಮನದ ಭಾವನೆಗಳನ್ನೂ,ಸೃಜನಶೀಲತೆಯನ್ನೂ, ಅಭಿಪ್ರಾಯಗಳನ್ನು ಮಂಡಿಸಲು ಬೇರೆ ವೇದಿಕೆ ಯಾವುದಿದೆ? ಅವರಿಗಾದರೆ ಪತ್ರಿಕೆಯ ಮೂಲಕ ತೀರಿಸಿಕೊಳ್ಳಬಲ್ಲರು.

ಕನ್ನಡಪ್ರಭದಲ್ಲಿ ಕೆಲಸ ಮಾಡುವ ಜೋಗಿ ಬ್ಲಾಗಿಸುತ್ತಿದ್ದಾರೆಂದರೆ ಇದೂ ಒಂದು ಬೇರೆಯೇ ತೆರನಾದ ಮಾಧ್ಯಮ ಎಂಬ ಅರಿವು ಅವರಿಗೂ ಇದ್ದಿರಬಹುದು ಅಲ್ಲದೇ ಅವರಂಥವರೇ ಬ್ಲಾಗಿಸುತ್ತಿರುವಾಗ ನಮಗೂ ಇದು ಒಳ್ಳೆಯ ಅಭಿವ್ಯಕ್ತಿಯ ಪ್ಲಾಟ್ ಫಾರಮ್ ಅನ್ನುವುದರಲ್ಲಿ ಅನುಮಾನವೇ ಬೇಡ ಎಂಬ ಭಾವನೆ ಮೂಡಿ ಬ್ಲಾಗಿಸಲು ಉತ್ಸಾಹ ಹುಟ್ಟುತ್ತಿತ್ತು. ಅಮಿತಾಭ್ ಬಚ್ಚನ್ ಗೆ ಬ್ಲಾಗು ಬರೆಯಲು 110 ಕೋಟಿ ನೀಡಿದ ಸುದ್ಧಿ ಕೇಳಿಯಂತೂ ನಮ್ಮ ಬ್ಲಾಗೂ ಓದಿ ಯಾರಾದರೂ ಅದಕ್ಕಿಂತ ಹೆಚ್ಚು ಕೊಡಲು ಮುಂದೆ ಬರುವ ಸಾಧ್ಯತೆ ಇಲ್ಲದಿಲ್ಲ ಎಂಬ ಹಗಲುಗನಸುಗಳೂ ದಂಡಿಯಾಗಿ ಬರತೊಡಗುತ್ತಿತ್ತು.

ಆದರೆ ಅವರೂ ರವಿಯ, ಭಟ್ಟರ ಮಾತಿಗೆ ಒಪ್ಪುವವರಂತೆ ಬ್ಲಾಗಿನಂಗಡಿ ಮುಚ್ಚಿ ಕನ್ನಡಪ್ರಭದ ಶಾಪಿಂಗ್ ಮಾಲ್ ನಲ್ಲೇ ಕುಳಿತರು.
ಒಳಗೆ ಕುಳಿತಿದ್ದ ಗೊಂದಲ ಮತ್ತೆ ನುಂಗಲು ಬಾಯ್ತೆರೆಯಿತು.

ಹೀಗೆ ದೊಡ್ಡೋರೆಲ್ಲಾ ಬ್ಲಾಗಿನಿಂದ ಪ್ರಯೋಜನವಿಲ್ಲ; ಮೂರ್ಕಾಸೂ ಹುಟ್ಟದ ಚಾಳಿ ಅನ್ನುತ್ತಿದ್ದರೆ ದಿನ ದಿನ ಬ್ಲಾಗು ಓದುವವರಿಗೆ, ಬರೆಯುವವರಿಗೆ ಕಡೆಯ ಪಕ್ಷ ಸುಮ್ಮನೆ ಕಾಫಿ ಕುಡಿಯುತ್ತಿದ್ದ ಸಮಯದಲ್ಲಾದರೂ ಆಲೋಚನೆ ಬಂದಿರುತ್ತೆ. ಮನದೊಳಗೆ ಚಿಂತನೆ ನಡೆದಿರುತ್ತೆ. ಒಂದು ಅಭಿಪ್ರಾಯ ಮೂಡಿರುತ್ತೆ.

ಯಾರೇನೇ ಅಂದರೂ ಇದು ಭಾರತ; ಇಲ್ಲಿ ಜನತೆಯೇ ಜನಾರ್ಧನ. ಜಾಸ್ತಿ ಜನ ಹೇಳುವುದೇ,ಒಪ್ಪಿಕೊಳ್ಳುವುದೇ ಸತ್ಯ. ನಿಮ್ಮ ಅಭಿಪ್ರಾಯವನ್ನೂ ಹೀಗೆ ಸುಮ್ಮನೆ ಲೈಟ್ ಆಗಿ ಹಂಚಿಕೊಳ್ಳಿ. ಡಿಕಾಕ್ಷನ್ನು ಸ್ವಲ್ಪ ಕಮ್ಮಿ ಇರಲಿ.

Friday, February 20, 2009

ಕಾಫಿ ಕ್ಲಬ್ಬು ಕೆಂಡ ಸಂಪಿಗೇಲಿ


ಕಾಫಿ ಕ್ಲಬ್ಬಿನಲ್ಲಿ ನಮಗೆ ಒಂದು ನಯಾಪೈಸೆ ವರಮಾನವಿಲ್ಲದ್ದರಿಂದ ನಮ್ಮಿಂದ ಜಾಹೀರಾತುದಾರರಿಗೆ, ನಮ್ಮ ಕಾಫಿ ಕ್ಲಬ್ಬನ್ನು ಹೊಗಳುವುದಕ್ಕೆ, ಗಿರಾಕಿಗಳನ್ನು ಸೂಜಿಗಲ್ಲಿನಂತೆ ಸೆಳೆಯುವುದಕ್ಕೆ ತಮ್ಮ ಶಬ್ಧ ಪಾಂಡಿತ್ಯವನ್ನು ಮಸೆಯುತ್ತ ಕುಳಿತ ಬುದ್ಧಿವಂತರಿಗೆ ಕೆಲಸವಿಲ್ಲದಂತಾಗಿದೆ. ರಿಸೆಷನ್ ಎಂಬ ಸಂಕಟಕ್ಕೆ ನಮ್ಮದೂ ಚೂರು ಕಾಣಿಕೆ ಈ ರೀತಿ ಸಂದಾಯವಾಗುತ್ತಿದೆ.

ಆದರೆ ಓದುವವರೇ ಇಲ್ಲದೇ ಬರೆಯುವವರು ಈ ಭೂಮಿಯ ಮೇಲೆ ಇರುವ ತನಕ ಬರೆಯುವವರನ್ನೆಲ್ಲಾ ಪ್ರೋತ್ಸಾಹಿಸುವವರು ಬೆನ್ನ ಮೇಲೆ ಏಟು ಹಾಕುವವರು (ಮೆಚ್ಚುಗೆಗೋ, ಅವರು ಕೊಡುವ ಕಾಟ ಸಹಿಸದೆಯೋ) ಇದ್ದೇ ಇರುತ್ತಾರೆ.

ನಮ್ಮ ಕಾಫಿ ಕ್ಲಬ್ಬಿಗೆ ಕೆಂಡ ಸಂಪಿಗೆ ಶುಭಾಶಯ ಕೋರಿದ್ದಾರೆ. ಅವರೇನೋ ಎಲ್ಲಾ ಬ್ಲಾಗುಗಳ ಬಗ್ಗೆ ಬರೆದು ಪುಕ್ಕಟೆ ಪಬ್ಲಿಸಿಟಿ ಕೊಡುತ್ತಾರೆ. ಅದರಲ್ಲೇನು ವಿಶೇಷ ಎಂದು ಕಾಫಿ ಕುಡಿಯದೆ ಸಕ್ಕರೆ ಕಮ್ಮಿಯಿದೆ ಎನ್ನುವ ಸಿನಿಕರಿಗೆ ಕಮ್ಮಿಯಿಲ್ಲ. ಬ್ಲಾಗು ತೆರೆದ ಮೇಲೆ ಒಂದಲ್ಲ ಒಂದು ದಿನ ಕೆಂಡ ಸಂಪಿಗೆಯಲ್ಲಿ ಕಾಣಬೇಕು ಎಂದು ಸಂಶೋಧನಾ ಪ್ರಬಂಧ ಮಂಡಿಸುವ ಪಂಡಿತರಿಗೂ ಕೊರತೆಯಿಲ್ಲ. ಆದರೆ ಸರಿಯಾಗಿ ಮುನ್ನೂರ ಅರವತ್ತೈದು ದಿನಗಳಿಗೊಮ್ಮೆ (ಫೆ ೨೯ಕ್ಕೆ ಹುಟ್ಟಿದವರನ್ನು ಬಿಟ್ಟು) ಬರ್ತ್ ಡೇ ಬರುತ್ತದೆಂದು ತಿಳಿದಿದ್ದರೂ ಆ ದಿನ ಸಂಭ್ರಮಿಸದೆ, ಅಟ್ಲೀಸ್ಟ್ ಸಂಭ್ರಮಿಸುವ ನಾಟಕವಾಡದೆ ಇರಲಾದೀತೇ? ಇಲ್ಲ ಅಲ್ಲವೇ?

ಅದಕ್ಕೆ ನಮ್ಮದು ಇಷ್ಟು ಸಂಭ್ರಮ! ಈ ಕಾಫಿ ಕಪ್ಪಿನೊಳಗಿಲ್ಲದ ಜ್ಞಾನೋದಯ ನಿಮಗೆ ಹಿಮಾಲಯದಲ್ಲೂ ಸಿಕ್ಕುವುದಿಲ್ಲ.

Wednesday, February 18, 2009

ನೀವು ಡೈರಿ ಬರೀತೀರಾ?

diary ದಿನಚರಿ ಬರೆಯುವುದನ್ನು ಅನೇಕರು ಹವ್ಯಾಸದ ಹಾಗೆ, ಕೆಲವರು ವ್ರತದ ಹಾಗೆ, ಕೆಲವರು ಮಹಾ ಸಾಹಸದ ಹಾಗೆ ಭಾವಿಸುತ್ತಾರೆ. ದಿನಚರಿಯೆಂಬುದು ತೀರಾ ಖಾಸಗಿಯಾದ ಸಂಗತಿಯಾದ್ದರಿಂದ ಅದರಲ್ಲಿ ಏನಿರಬೇಕು, ಏನಿರಬಾರದು ಎಂದು ಸಾರ್ವಜನಿಕವಾಗಿ ಚರ್ಚಿಸುವುದು ಅನುಪಯುಕ್ತ.

ಡೈರಿ ಬರೆಯುವುದರಿಂದ ಕೈ ಬರಹ ದುಂಡಗಾಗುತ್ತೆ, ಕೆಲ ಸಮಯ ಮನಸ್ಸು ಏಕಾಗ್ರವಾಗಿರುತ್ತೆ, ಪೆನ್ನು, ಶಾಹಿ, ಡೈರಿ ಮಾರುವ ಸ್ಟೇಷನರಿ ಅಂಗಡಿಯವನಿಗೆ ಲಾಭವಾಗುತ್ತದೆ ಎಂಬೆಲ್ಲಾ ‘ಪ್ರಮುಖ’ ಸಂಗತಿಗಳನ್ನು ಬಿಟ್ಟು ದಿನಚರಿ ಬರೆಯುವುದರಿಂದ ನೀವು ಕಂಡುಕೊಂಡಿರುವ ಅನುಕೂಲಗಳೇನು, ಅದು ನಿಮಗೆ ಒದಗಿಸಿದ ಕಂಫರ್ಟ್ ಎಂಥದ್ದು, ಡೈರಿ ನಿಮ್ಮ ಬದುಕನ್ನು ರೂಪಿಸಿಕೊಳ್ಳುವುದರಲ್ಲಿ ನೀಡಿದ ನೆರವಿನ ಬಗ್ಗೆ ಚುಟುಕಾಗಿ ಬಿಸಿ ಕಾಫಿ ಹೀರುತ್ತ ಹರಟಿದ ಹಾಗೆ ಬರೆಯುತ್ತೀರಾ?

ಇದು ಕಾಫಿ ಕ್ಲಬ್ಬು. ಇಲ್ಲಿ ಫಾರ್ಮಾಲಿಟಿ ಬೇಕಿಲ್ಲ. ಮುಕ್ತವಾಗಿ ಮಾತಾಡಿ... 

Friday, February 6, 2009

ನಮ್ ಕಾಫಿ ಕ್ಲಬ್ ಕನ್ನಡ ಪ್ರಭಾದಲ್ಲಿ!


ನಮ್ ಕಾಫಿ ಕ್ಲಬ್ಬಿಗೆ ಮಂಗಳೂರಿನ ಪಬ್ಬಿಗೆ ಸಿಕ್ಕಷ್ಟು ಪ್ರಚಾರ ಸಿಕ್ಕಬೇಕು ಎಂಬುದು ನಮ್ಮ ದುರಾಸೆಯಲ್ಲ. ಕಾಫಿ ಕಂಪು ಹರಡಿದಷ್ಟೇ ನಿಶ್ಯಬ್ಧವಾಗಿ ಕ್ಲಬ್ಬಿನ ಮಾತೂ ಹರಡಬೇಕು ಅನ್ನೋದು ನಮ್ಮ ಆಸೆ. ಈ ಆಸೆ ಇಷ್ಟು ಬೇಗ ಪೂರ್ಣವಾಗುತ್ತೆ ಅಂತ ಗೊತ್ತಿದ್ರೆ ಕಾಣದ ದೇವರಿಗೆ ಕೈಮುಗಿಯುವ ಕಷ್ಟ ಇರ್ತಿರ್ಲಿಲ್ಲ.
ಕನ್ನಡದ ಬ್ಲಾಗುಗಳನ್ನು ಪರಿಚಯಿಸಿ ಪ್ರೋತ್ಸಾಹಿಸುತ್ತಿರುವ ಕನ್ನಡಪ್ರಭ, ಇದೀಗ ತಾನೆ ಕಣ್ತೆರೆಯುತ್ತಿರುವ
ನಮ್ ಕಾಫೀ ಕ್ಲಬ್ಬನ್ನೂ ಪರಿಚಯಿಸಿದೆ.

ಕನ್ನಡಪ್ರಭದಲ್ಲಿ ಕಾಫೀ ಕ್ಲಬ್ಬಿನ ಲೇಖನಕ್ಕೆ ಈ ಲಿಂಕ್ ಕ್ಲಿಕ್ಕಿಸಿ.
http://www.kannadaprabha.com/News.asp?Topic=114&Title=%86%DB%C7V%DB%BE%DA%DFy&ID=KPO20090204144139&nDate=


ವ್ಯಾಲಂಟೈನ್ಸ್ ಡೇ ಆಚರಣೆ ಬೇಕಾ?

 

SANY0332ನಮ್ ಕಾಫಿ ಕ್ಲಬ್ಬಿನಲ್ಲಿ ಈ ರೀತಿಯದೊಂದು ಚರ್ಚೆ ಶುರುವಾಗಿದೆ. 
ಇಲ್ಲೇ ಪಕ್ಕದಲ್ಲಿ ಒಂದು ಪೋಲ್ ಇದೆ ನಿಮ್ ಓಟು ಚಲಾಯಿಸಿ, ಜಾಗೋ!
ಇದ್ರ ಬಗ್ಗೆ ಮಾತಾಡ್ಬೇಕು ಅನ್ನೋರು ಇಲ್ಲಿ ಕಮೆಂಟು ಬರೆದು ಹಾಕಿ.
ಚರ್ಚೆಯಿಂದ ಯಾವ ದೇಶವೂ ಉದ್ಧಾರವಾದ ಉದಾಹರಣೆ ಫೆ ೬, ೨೦೦೯ರ ವರೆಗೆ ಒಂದೂ ಕಂಡು ಬಂದಿಲ್ಲ. ಹೀಗಾಗಿ ಉದ್ದುದ್ದ  ಬರೆದು ನಿಮ್ಮನ್ನು ಇತರರನ್ನು ಹಿಂಸಿಸಬೇಡಿ.
ಚುಟುಕಾಗಿ, ಮೊನಚಾಗಿ ನಾಲ್ಕು ಸಾಲು ಗೀಚಿ, ಕಾಫಿ ಹಬೆ ಆರುವುದರೊಳಗೆ!

Saturday, January 31, 2009

ವೆಲ್ಕಮ್ ಟು ಕಾಫಿ ಕ್ಲಬ್!!!

ವೆಲ್ಕಮ್ ಟು ಕಾಫಿ ಕ್ಲಬ್!
ಹದವಾದ ಬಿಸಿಬಿಸಿ ಕಾಫಿ ಕಪ್ಪಿನಂತಹುದು ಈ ಬ್ಲಾಗು.
ತಲೆಕೆಡಿಸುವ ಚರ್ಚೆಗಳು, ಗಂಭಿರಾತಿಗಂಭೀರ ಬರಹಗಳು, ವೈಯಕ್ತಿಕ ಆರೋಪ ಪ್ರತ್ಯಾರೋಪಗಳು ಇವೆಲ್ಲವುಗಳಿಂದ ದೂರ ಉಳಿದು, ಬಿಸಿ ಕಾಫಿ ಕಪ್ಪಿನಂತಹ ನವಿರಾದ , ಓದಿದೊಡನೆ ರೆಫ್ರೆಶಿಂಗ್ ಅನಿಸುವಂತಹ ಬರಹಗಳನ್ನು ನಿಮಗೆ ಪರಿಚಯಿಸುವ ಪ್ರಯತ್ನ. ಕಾಫಿ ಕುಡಿಯುವಾಗಿನ ಆಹ್ಲಾದತೆ ಅನುಭವಿಸಿ ನೀವು ಹ್ಯಾಪಿಯಾಗಬೇಕೆಂಬ ಹಂಬಲ ನಮ್ಮದು. ನಮ್ಮ ಬ್ಲಾಗಿನ ಹೆಚ್ಚಿನ ಪರಿಚಯ ನಿಮಗೆ ನಮ್ಮ ಮುಂದಿನ ಬರಹಗಳಲ್ಲಿ ಆಗಲಿದೆ.

ಇದು ಕಾಫಿ ಕ್ಲಬ್


ಇದು ಕಾಫಿ ಕ್ಲಬ್!

ಕಾಫಿ ಗಿಡವನ್ನು ಬೆಳೆಸಿ ಕಾಫಿ ಬೀಜ ಪುಡಿ ಮಾಡಿ, ಕಬ್ಬನ್ನು ಹಿರಿದು ಸಕ್ಕರೆ ಮಾಡಿ, ಹಸುವನ್ನು ಸಾಕಿ ಹಾಲ್ಕರೆದು ಕಾಫಿ ಮಾಡುವ ಕಷ್ಟ ನೀವು ತೆಗೆದುಕೊಳ್ಳಬೇಕಿಲ್ಲ. ಕಪ್ಪು-ಸಾಸರ್ ಹೊಂದಿಸುವ, ತೊಳೆದಿಡುವ ರಗಳೆ ನಿಮಗಿಲ್ಲಿ ಇಲ್ಲ. ಇಲ್ಲಿ ಎಲ್ಲವೂ ಸಿದ್ಧವಿರುತ್ತೆ, ಬಂದು ಇಲ್ಲಿನ ಕಾಫಿ ಹೀರುತ್ತಾ ನಾಲ್ಕು ಘಳಿಗೆ ಕಳೆದು ಹೋದರೆ ಸಾಕು, ಕ್ಲಬ್ಬು ಪಾವನವಾಗುತ್ತೆ.

ವಿಪರೀತ ವೈಚಾರಿಕತೆಯನ್ನ, ನಿಮ್ಮ ಸಾಮಾಜಿಕ ಜವಾಬ್ದಾರಿಗಳನ್ನ, ಸಂವೇದನೆ- ಸಾದಾ ವೇದನೆಗಳನ್ನ ಇಲ್ಲಿ ಕ್ಲಬ್‌ನ ಎದುರಲ್ಲಿರುವ ಚಪ್ಪಲಿ ಸ್ಟ್ಯಾಂಡ್ ಬಳಿಯಲ್ಲೇ ಬಿಟ್ಟು ಒಳಬನ್ನಿ. ನಿಮ್ಮ ಹಮ್ಮು, ಬಿಮ್ಮು, ಸಿಟ್ಟು - ಸೆಡವು, ಪೂರ್ವಾಗ್ರಹಗಳಿಗೆಲ್ಲಾ ನೀವೇ ಜವಾಬ್ದಾರರು. ಕಾಫಿ ಕಪ್ಪುಗಳಲ್ಲಿ ದಯವಿಟ್ಟು ಕೈ ತೊಳೆಯಬೇಡಿ. ವೇಯಟರಿಗೆ ಟಿಪ್ಸ್ ಕೊಡುವುದ ಮರೆಯಬೇಡಿ.

ಬಿಸಿ ಬಿಸಿ ಕಾಫಿಯ ಹಬೆಯೇರುತಿದೆ. ಬನ್ನಿ ಒಂದೊಂದು ಕಪ್ ಹೀರಿ...