Wednesday, July 14, 2010

ಗರಿ ಗರಿ ಕ(ವಿ)ತೆ!

ತುಂಬು ಕವಿಗೋಷ್ಠಿ
ಖ್ಯಾತ ಕವಿ ಸುಬ್ಬರಾಯರು
ಪ್ಯಾಂಟಿನ ಎಡಜೇಬಿನಿಂದ ಗರಿಗರಿ
ಪೇಪರು ತೆಗೆದು ಕವಿತೆ
ಓದತೊಡಗಿದರು

"ಎರಡು ಪ್ಯಾಂಟು, ಮೂರು ಬನಿಯನ್ನು
ಎರಡು ಪ್ಯಾಂಟು, ಮೂರು ಬನಿಯನ್ನು
ಒಂದು ರಗ್ಗು.."

ಮೊದಲ ಸಾಲಲಿ ಕೂತ ಕವಿಯತ್ರಿಯರಿಗೆಲ್ಲಾ
ಸಹಿಸಲಸಾಧ್ಯ ಖುಷಿ
ಖಂಡಿತಾ ಇದು ಮಹಿಳೆಯರ  ಮೇಲಿನ
ದೌರ್ಜನ್ಯದ ಕುರಿತೇ ಇರುವ ಕವಿತೆ
ಇಲ್ಲವಾದರೆ ಒಂದಾದರೂ ಸೀರೆಯಿರಬೇಕಿತ್ತಲ್ಲವೇ!

ನವಕವಿಗಳ ಕಿವಿಚುರುಕು
ಎರಡು ಪ್ಯಾಂಟು ಮತ್ತು ರಗ್ಗು ಒಂದೇ ಆದ್ದರಿಂದ
ಇದು ಆಧುನಿಕ ಸಮಸ್ಯೆ ಬಿಂಬಿಸುವ ಕವಿತೆ,
ಅಲ್ಲಿನ ಪ್ರತಿಮೆ ಅದ್ಭುತ ಅಂತ ತಮ್ಮತಮ್ಮಲ್ಲೇ
ಗೊಣಗಿಕೊಂಡರು

ಇಡೀ ಸಭೆ ಸುಬ್ಬರಾಯರ ಕವಿತೆಯ
ಮುಂದಿನ ಸಾಲಿಗೆ ಕಿವಿ ನೆಟ್ಟಿತ್ತು.

ಬೆವರೊರೆಸಿಕೊಂಡ ಸುಬ್ಬರಾಯರು
"ಕ್ಷಮಿಸಿ, ಅದು ಹೆಂಡತಿ ಕೊಟ್ಟ ಧೋಬಿ ಚೀಟಿ"
ಅಂದು ಬಲಕಿಸೆಗೆ ಕೈಹಾಕಿ
ಗರಿಗರಿ ಕವಿತೆ ಹೆಕ್ಕಿದರು.

******

(ಓದಿದ್ದ ಎಸ್ಸೆಮ್ಮೆಸ್ಸೊಂದರ ಕವಿತಾರೂಪ)

11 comments:

ಕಾಫಿ ಕುಡೀತಾ ಹಂಗೇ ಒಂದಿಷ್ಟು ಮಾತಾಡಿ