Thursday, April 2, 2009

ನೀವು ಓಟು ಹಾಕ್ತೀರಾ?

 

ಲೋಕಸಭೆಗೆ ಚುನಾವಣೆಗಳು ನಡೆಯುತ್ತಿವೆ. ಮನೆಯಲ್ಲಿ ಅಪ್ಪನಿಗೆ ರಾಜಕೀಯದ ಹುಚ್ಚು ಇದ್ದು ಬಿಟ್ಟರಂತೂ ಮುಗಿತೂ. ಅಪ್ಪನ ಪೇಪರು, ಟಿವಿ ನ್ಯೂಸ್ ಚಾನಲ್ಲುಗಳ ಮೂಲಕ ಮಕ್ಕಳಿಗೂ ಸಾಂಕ್ರಾಮಿಕವಾಗಿ ರಾಜಕೀಯದ ಹುಚ್ಚು ಹತ್ತಿ ಬಿಡುತ್ತದೆ. ಕ್ರಿಕೆಟ್ ಪ್ರೇಮ, ಧಾರಾವಾಹಿ ಮೋಹ, ರಾಜಕೀಯದ ಪ್ಯಾಶನ್ನು ಸಹ ಒಂದು ಜನರೇಶನ್ನಿನಿಂದ ಮತ್ತೊಂದಕ್ಕೆ ಬಳುವಳಿಯಾಗಿ ಬರುವ ಆಸ್ತಿಯಾಗಿದೆ.

ನಿಮಗೆ ಓಟು ಹಾಕುವ ಅರ್ಹತೆ ಬಂದಿದೆ ಎನ್ನುವುದಾದರೆ, ನಿಮಗೆ ಈಗಾಗಲೇ ಓಟು ಹಾಕಿರುವ ಅನುಭವವಿದೆಯೆನ್ನುವುದಾದರೆ ಇನ್ನೊಂದೆರಡು ನಿಮಿಷ ನಾವಿಲ್ಲಿ ಮಾತಾಡಬಹುದು. vote

ನಿಮ್ಮ ಮೊದಲ ಒಟು ಚಲಾವಣೆಯ ಅನುಭವ ಹೇಗಿತ್ತು ಎಂದು ಎಲ್ಲಾ ಪತ್ರಿಕೆಗಳು ಕೇಳುತ್ತವೆ. ಉತ್ತರ ಕೊಡಬೇಕಾದವರೆಲ್ಲರೂ ನಾನು ಯಾವ ಜಾತಿ ಅಭಿಮಾನವಿಲ್ಲದೆ, ಪಕ್ಷಪಾತವಿಲ್ಲದೆ, ಪೂರ್ವಾಗ್ರಹವಿಲ್ಲದೆ ಅಂತಃಸಾಕ್ಷಿ ಹೇಳಿದಂತೆ ಓಟು ಹಾಕಿದೆ ಎನ್ನುತ್ತಾರೆ. ಆದರೆ ಪ್ರತಿ ಸಲದ ಚುನಾವಣೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳ ಇತಿಹಾಸ ಹಾಗೂ ಸಾಧನೆ ಗಮನಿಸಿದರೆ ಮತ ಚಲಾಯಿಸಿದವರ ‘ಅಂತಃಸಾಕ್ಷಿ’ಯ ಬಗೆಗೇ ಸಂಶಯ ಹುಟ್ಟುತ್ತದೆ.

ಅದೇನೇ ಇರಲಿ, ನಮ್ ಕಾಫಿ ಕ್ಲಬ್ಬಲ್ಲಿ ಕಾಫಿ ಘಮದ ಜೊತೆಗೆ ಚುನಾವಣೆ ಬಿಸಿಯನ್ನೂ ಸೇರಿಸೋಣ ಎನ್ನುವ ಆಲೋಚನೆ ನಮ್ಮದು. ಜೊತೆಗೆ  ಬೇಸಿಗೆ ಬೇರೆ ಮೆಲ್ಲಗೆ ಶುರುವಾಗುತ್ತಿದೆ. ಬಿಸಿ ಅಧಿಕವಾದರೆ ತಿಳಿಸಿ, ಸಾಸರು ಬಳಸಿ.

ನೀವು ಓಟು ಹಾಕುವುದು ಪಕ್ಷವನ್ನು ನೋಡಿಯೋ ಅಥವಾ ನಿಮ್ಮ ಮತಕ್ಷೇತ್ರದ ಅಭ್ಯರ್ಥಿಯ ಸಾಧನೆಯ ಬಗ್ಗೆ ತಿಳಿದುಕೊಂಡೋ? ಮತ ಹಾಕುವುದು ಪಕ್ಷದ ಹೆಸರು ನೋಡಿ ಎನ್ನುವುದಾದರೆ ಆ ಪಕ್ಷದ ಬಗೆಗಿನ ಅಭಿಮಾನ ನಿಮಗೆ ಬೆಳೆದದ್ದು ಹೇಗೆ ಎಂದೂ ತಿಳಿಸಿ. ಏಕೆಂದರೆ ಒಂದೇ ಮನೆಯಲ್ಲಿ ನಾಲ್ಕು ಮಂದಿ ಓಟು ಹಾಕುವವರಿದ್ದರೆ ಬಹುತೇಕ ಎಲ್ಲರೂ ಒಂದೇ ಪಕ್ಷಕ್ಕೆ ಹಾಕುವ ಪದ್ಧತಿ ಇರುತ್ತೆ. ಇನ್ನು ನಿಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ನಿಂತ ಅಭ್ಯರ್ಥಿಗಳ ಬಗ್ಗೆ ನಿಮಗೇನು ಗೊತ್ತಿರುತ್ತೆ? ಅವರ ಬಗ್ಗೆ ತಿಳಿಯುವ ಪ್ರಯತ್ನವನ್ನು ಮಾಡುತ್ತೀರಾ?

ಹದವಾದ ಬಿಸಿಯ ಕಾಫಿಯ ಜೊತೆ ಲೋಕಾಭಿರಾಮದ ಈ ಹರಟೆಗೆ ಸ್ವಾಗತ...

Wednesday, April 1, 2009

ಕಾಫಿ ಕ್ಲಬ್ಬಿಗೆ ಬೀಗ

 

ವ್ಯಾಲಂಟೈನ್ ಡೇ ಸಂದರ್ಭದಲ್ಲಿ ನಾಡಿನ ಪ್ರಮುಖ ಸಂಘಟನೆಯ ವಿರುದ್ಧ ಕೆಲವು ಅವಹೇಳನಕಾರಿ ಪ್ರತಿಕ್ರಿಯೆಗಳನ್ನು, ಹೇಳಿಕೆಗಳನ್ನು ಪ್ರಕಟಿಸಿದ್ದೇವೆ ಎಂಬ ಕಾರಣಕ್ಕೆ ‘ಕಾಫಿ ಕ್ಲಬ್’ನ ಮೇಲೆ ಆ ಸಂಘಟನೆಯ ಕಣ್ಣು ಬಿದ್ದಿತ್ತು. ನಮ್ಮ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸುವ ಸಂಬಂಧ ಆ ಸಂಘಟನೆ ನಡೆಸುತ್ತಿದ್ದ ಪ್ರಯತ್ನಗಳನ್ನು ಇಷ್ಟು ದಿನ ನಾವು ಮೌನವಾಗಿ ಗಮನಿಸುತ್ತಿದ್ದೆವು. ಹೀಗಾಗಿ ಕ್ಲಬ್ಬಲ್ಲಿ ಹೆಚ್ಚಿನ ಚರ್ಚೆ ನಡೆದಿರಲಿಲ್ಲ.

ಈಗ ನ್ಯಾಯಾಲಯದಲ್ಲಿ ಕೇಸು ಕಡೆಯ ಹಂತಕ್ಕೆ ಬಂದಿದೆ. ಒಂದು ಜವಾಬ್ದಾರಿಯುತ ಸಂಘಟನೆಯ ಬಗ್ಗೆ, ಗೌರವಯುತ ಸಂಘಟಕನ ಬಗ್ಗೆ ಅವಹೇಳನಕಾರಿಯಾಗಿ ಬ್ಲಾಗಿನಲ್ಲಿ ಬರೆದದ್ದು ತಪ್ಪೆಂದು ನ್ಯಾಯಾಲಯ ತೀರ್ಪಿತ್ತಿದೆ. ತತ್ಸಂಬಂಧ ಈ ಬ್ಲಾಗಿನ ಮಾಲೀಕರನ್ನು, ಬರಹಗಾರರನ್ನೂ ವಾಗ್ದಂಡನೆಗೆ ಗುರಿ ಮಾಡಿ, ಅವರಿಂದ ಬೇಷರತ್ ಕ್ಷಮೆಯನ್ನು ಪಡೆಯುವ, ಬ್ಲಾಗನ್ನು ಮುಚ್ಚುವ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಲಾಗಿದೆ.

ಈ ಕಡೆಯ ಪೋಸ್ಟಿನಲ್ಲಿ, ಈ ಬ್ಲಾಗಿನ ಮಾಲೀಕನಾದ ನಾನು ಸುಪ್ರೀತ್.ಕೆ.ಎಸ್ ಆ ಸಂಘಟನೆಯ ಹಾಗೂ ಅದರ ಮುಖಂಡರ ಕ್ಷಮೆಯಾಚಿಸುವೆ. ಇನ್ನು ಮುಂದೆ ಇಂತಹ ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದು ಮುಚ್ಚಳಿಕೆ ನೀಡುವೆ.

ವಿ.ಸೂ: ಈ ಬ್ಲಾಗಿನಲ್ಲಿ ಇನ್ನು ಮುಂದೆ ಯಾವುದೇ ಬರಹ ಪ್ರಕಟವಾಗೋದಿಲ್ಲ.