Wednesday, February 25, 2009
ಬ್ಲಾಗ್ ಯಾಕೆ ಬರೆಯಬೇಕು?
ಕನ್ನಡಪ್ರಭದಲ್ಲಿ ಕೆಲಸ ಮಾಡುವ ಜೋಗಿ ಬ್ಲಾಗಿಸುತ್ತಿದ್ದಾರೆಂದರೆ ಇದೂ ಒಂದು ಬೇರೆಯೇ ತೆರನಾದ ಮಾಧ್ಯಮ ಎಂಬ ಅರಿವು ಅವರಿಗೂ ಇದ್ದಿರಬಹುದು ಅಲ್ಲದೇ ಅವರಂಥವರೇ ಬ್ಲಾಗಿಸುತ್ತಿರುವಾಗ ನಮಗೂ ಇದು ಒಳ್ಳೆಯ ಅಭಿವ್ಯಕ್ತಿಯ ಪ್ಲಾಟ್ ಫಾರಮ್ ಅನ್ನುವುದರಲ್ಲಿ ಅನುಮಾನವೇ ಬೇಡ ಎಂಬ ಭಾವನೆ ಮೂಡಿ ಬ್ಲಾಗಿಸಲು ಉತ್ಸಾಹ ಹುಟ್ಟುತ್ತಿತ್ತು. ಅಮಿತಾಭ್ ಬಚ್ಚನ್ ಗೆ ಬ್ಲಾಗು ಬರೆಯಲು 110 ಕೋಟಿ ನೀಡಿದ ಸುದ್ಧಿ ಕೇಳಿಯಂತೂ ನಮ್ಮ ಬ್ಲಾಗೂ ಓದಿ ಯಾರಾದರೂ ಅದಕ್ಕಿಂತ ಹೆಚ್ಚು ಕೊಡಲು ಮುಂದೆ ಬರುವ ಸಾಧ್ಯತೆ ಇಲ್ಲದಿಲ್ಲ ಎಂಬ ಹಗಲುಗನಸುಗಳೂ ದಂಡಿಯಾಗಿ ಬರತೊಡಗುತ್ತಿತ್ತು.
ಆದರೆ ಅವರೂ ರವಿಯ, ಭಟ್ಟರ ಮಾತಿಗೆ ಒಪ್ಪುವವರಂತೆ ಬ್ಲಾಗಿನಂಗಡಿ ಮುಚ್ಚಿ ಕನ್ನಡಪ್ರಭದ ಶಾಪಿಂಗ್ ಮಾಲ್ ನಲ್ಲೇ ಕುಳಿತರು.
ಒಳಗೆ ಕುಳಿತಿದ್ದ ಗೊಂದಲ ಮತ್ತೆ ನುಂಗಲು ಬಾಯ್ತೆರೆಯಿತು.
ಹೀಗೆ ದೊಡ್ಡೋರೆಲ್ಲಾ ಬ್ಲಾಗಿನಿಂದ ಪ್ರಯೋಜನವಿಲ್ಲ; ಮೂರ್ಕಾಸೂ ಹುಟ್ಟದ ಚಾಳಿ ಅನ್ನುತ್ತಿದ್ದರೆ ದಿನ ದಿನ ಬ್ಲಾಗು ಓದುವವರಿಗೆ, ಬರೆಯುವವರಿಗೆ ಕಡೆಯ ಪಕ್ಷ ಸುಮ್ಮನೆ ಕಾಫಿ ಕುಡಿಯುತ್ತಿದ್ದ ಸಮಯದಲ್ಲಾದರೂ ಆಲೋಚನೆ ಬಂದಿರುತ್ತೆ. ಮನದೊಳಗೆ ಚಿಂತನೆ ನಡೆದಿರುತ್ತೆ. ಒಂದು ಅಭಿಪ್ರಾಯ ಮೂಡಿರುತ್ತೆ.
ಯಾರೇನೇ ಅಂದರೂ ಇದು ಭಾರತ; ಇಲ್ಲಿ ಜನತೆಯೇ ಜನಾರ್ಧನ. ಜಾಸ್ತಿ ಜನ ಹೇಳುವುದೇ,ಒಪ್ಪಿಕೊಳ್ಳುವುದೇ ಸತ್ಯ. ನಿಮ್ಮ ಅಭಿಪ್ರಾಯವನ್ನೂ ಹೀಗೆ ಸುಮ್ಮನೆ ಲೈಟ್ ಆಗಿ ಹಂಚಿಕೊಳ್ಳಿ. ಡಿಕಾಕ್ಷನ್ನು ಸ್ವಲ್ಪ ಕಮ್ಮಿ ಇರಲಿ.
Friday, February 20, 2009
ಕಾಫಿ ಕ್ಲಬ್ಬು ಕೆಂಡ ಸಂಪಿಗೇಲಿ

ಕಾಫಿ ಕ್ಲಬ್ಬಿನಲ್ಲಿ ನಮಗೆ ಒಂದು ನಯಾಪೈಸೆ ವರಮಾನವಿಲ್ಲದ್ದರಿಂದ ನಮ್ಮಿಂದ ಜಾಹೀರಾತುದಾರರಿಗೆ, ನಮ್ಮ ಕಾಫಿ ಕ್ಲಬ್ಬನ್ನು ಹೊಗಳುವುದಕ್ಕೆ, ಗಿರಾಕಿಗಳನ್ನು ಸೂಜಿಗಲ್ಲಿನಂತೆ ಸೆಳೆಯುವುದಕ್ಕೆ ತಮ್ಮ ಶಬ್ಧ ಪಾಂಡಿತ್ಯವನ್ನು ಮಸೆಯುತ್ತ ಕುಳಿತ ಬುದ್ಧಿವಂತರಿಗೆ ಕೆಲಸವಿಲ್ಲದಂತಾಗಿದೆ. ರಿಸೆಷನ್ ಎಂಬ ಸಂಕಟಕ್ಕೆ ನಮ್ಮದೂ ಚೂರು ಕಾಣಿಕೆ ಈ ರೀತಿ ಸಂದಾಯವಾಗುತ್ತಿದೆ.
ಆದರೆ ಓದುವವರೇ ಇಲ್ಲದೇ ಬರೆಯುವವರು ಈ ಭೂಮಿಯ ಮೇಲೆ ಇರುವ ತನಕ ಬರೆಯುವವರನ್ನೆಲ್ಲಾ ಪ್ರೋತ್ಸಾಹಿಸುವವರು ಬೆನ್ನ ಮೇಲೆ ಏಟು ಹಾಕುವವರು (ಮೆಚ್ಚುಗೆಗೋ, ಅವರು ಕೊಡುವ ಕಾಟ ಸಹಿಸದೆಯೋ) ಇದ್ದೇ ಇರುತ್ತಾರೆ.
ನಮ್ಮ ಕಾಫಿ ಕ್ಲಬ್ಬಿಗೆ ಕೆಂಡ ಸಂಪಿಗೆ ಶುಭಾಶಯ ಕೋರಿದ್ದಾರೆ. ಅವರೇನೋ ಎಲ್ಲಾ ಬ್ಲಾಗುಗಳ ಬಗ್ಗೆ ಬರೆದು ಪುಕ್ಕಟೆ ಪಬ್ಲಿಸಿಟಿ ಕೊಡುತ್ತಾರೆ. ಅದರಲ್ಲೇನು ವಿಶೇಷ ಎಂದು ಕಾಫಿ ಕುಡಿಯದೆ ಸಕ್ಕರೆ ಕಮ್ಮಿಯಿದೆ ಎನ್ನುವ ಸಿನಿಕರಿಗೆ ಕಮ್ಮಿಯಿಲ್ಲ. ಬ್ಲಾಗು ತೆರೆದ ಮೇಲೆ ಒಂದಲ್ಲ ಒಂದು ದಿನ ಕೆಂಡ ಸಂಪಿಗೆಯಲ್ಲಿ ಕಾಣಬೇಕು ಎಂದು ಸಂಶೋಧನಾ ಪ್ರಬಂಧ ಮಂಡಿಸುವ ಪಂಡಿತರಿಗೂ ಕೊರತೆಯಿಲ್ಲ. ಆದರೆ ಸರಿಯಾಗಿ ಮುನ್ನೂರ ಅರವತ್ತೈದು ದಿನಗಳಿಗೊಮ್ಮೆ (ಫೆ ೨೯ಕ್ಕೆ ಹುಟ್ಟಿದವರನ್ನು ಬಿಟ್ಟು) ಬರ್ತ್ ಡೇ ಬರುತ್ತದೆಂದು ತಿಳಿದಿದ್ದರೂ ಆ ದಿನ ಸಂಭ್ರಮಿಸದೆ, ಅಟ್ಲೀಸ್ಟ್ ಸಂಭ್ರಮಿಸುವ ನಾಟಕವಾಡದೆ ಇರಲಾದೀತೇ? ಇಲ್ಲ ಅಲ್ಲವೇ?
ಅದಕ್ಕೆ ನಮ್ಮದು ಇಷ್ಟು ಸಂಭ್ರಮ! ಈ ಕಾಫಿ ಕಪ್ಪಿನೊಳಗಿಲ್ಲದ ಜ್ಞಾನೋದಯ ನಿಮಗೆ ಹಿಮಾಲಯದಲ್ಲೂ ಸಿಕ್ಕುವುದಿಲ್ಲ.
Wednesday, February 18, 2009
ನೀವು ಡೈರಿ ಬರೀತೀರಾ?
ದಿನಚರಿ ಬರೆಯುವುದನ್ನು ಅನೇಕರು ಹವ್ಯಾಸದ ಹಾಗೆ, ಕೆಲವರು ವ್ರತದ ಹಾಗೆ, ಕೆಲವರು ಮಹಾ ಸಾಹಸದ ಹಾಗೆ ಭಾವಿಸುತ್ತಾರೆ. ದಿನಚರಿಯೆಂಬುದು ತೀರಾ ಖಾಸಗಿಯಾದ ಸಂಗತಿಯಾದ್ದರಿಂದ ಅದರಲ್ಲಿ ಏನಿರಬೇಕು, ಏನಿರಬಾರದು ಎಂದು ಸಾರ್ವಜನಿಕವಾಗಿ ಚರ್ಚಿಸುವುದು ಅನುಪಯುಕ್ತ.
ಡೈರಿ ಬರೆಯುವುದರಿಂದ ಕೈ ಬರಹ ದುಂಡಗಾಗುತ್ತೆ, ಕೆಲ ಸಮಯ ಮನಸ್ಸು ಏಕಾಗ್ರವಾಗಿರುತ್ತೆ, ಪೆನ್ನು, ಶಾಹಿ, ಡೈರಿ ಮಾರುವ ಸ್ಟೇಷನರಿ ಅಂಗಡಿಯವನಿಗೆ ಲಾಭವಾಗುತ್ತದೆ ಎಂಬೆಲ್ಲಾ ‘ಪ್ರಮುಖ’ ಸಂಗತಿಗಳನ್ನು ಬಿಟ್ಟು ದಿನಚರಿ ಬರೆಯುವುದರಿಂದ ನೀವು ಕಂಡುಕೊಂಡಿರುವ ಅನುಕೂಲಗಳೇನು, ಅದು ನಿಮಗೆ ಒದಗಿಸಿದ ಕಂಫರ್ಟ್ ಎಂಥದ್ದು, ಡೈರಿ ನಿಮ್ಮ ಬದುಕನ್ನು ರೂಪಿಸಿಕೊಳ್ಳುವುದರಲ್ಲಿ ನೀಡಿದ ನೆರವಿನ ಬಗ್ಗೆ ಚುಟುಕಾಗಿ ಬಿಸಿ ಕಾಫಿ ಹೀರುತ್ತ ಹರಟಿದ ಹಾಗೆ ಬರೆಯುತ್ತೀರಾ?
ಇದು ಕಾಫಿ ಕ್ಲಬ್ಬು. ಇಲ್ಲಿ ಫಾರ್ಮಾಲಿಟಿ ಬೇಕಿಲ್ಲ. ಮುಕ್ತವಾಗಿ ಮಾತಾಡಿ...
Friday, February 6, 2009
ನಮ್ ಕಾಫಿ ಕ್ಲಬ್ ಕನ್ನಡ ಪ್ರಭಾದಲ್ಲಿ!

ನಮ್ ಕಾಫಿ ಕ್ಲಬ್ಬಿಗೆ ಮಂಗಳೂರಿನ ಪಬ್ಬಿಗೆ ಸಿಕ್ಕಷ್ಟು ಪ್ರಚಾರ ಸಿಕ್ಕಬೇಕು ಎಂಬುದು ನಮ್ಮ ದುರಾಸೆಯಲ್ಲ. ಕಾಫಿ ಕಂಪು ಹರಡಿದಷ್ಟೇ ನಿಶ್ಯಬ್ಧವಾಗಿ ಕ್ಲಬ್ಬಿನ ಮಾತೂ ಹರಡಬೇಕು ಅನ್ನೋದು ನಮ್ಮ ಆಸೆ. ಈ ಆಸೆ ಇಷ್ಟು ಬೇಗ ಪೂರ್ಣವಾಗುತ್ತೆ ಅಂತ ಗೊತ್ತಿದ್ರೆ ಕಾಣದ ದೇವರಿಗೆ ಕೈಮುಗಿಯುವ ಕಷ್ಟ ಇರ್ತಿರ್ಲಿಲ್ಲ.
ಕನ್ನಡದ ಬ್ಲಾಗುಗಳನ್ನು ಪರಿಚಯಿಸಿ ಪ್ರೋತ್ಸಾಹಿಸುತ್ತಿರುವ ಕನ್ನಡಪ್ರಭ, ಇದೀಗ ತಾನೆ ಕಣ್ತೆರೆಯುತ್ತಿರುವ
ನಮ್ ಕಾಫೀ ಕ್ಲಬ್ಬನ್ನೂ ಪರಿಚಯಿಸಿದೆ.
ಕನ್ನಡಪ್ರಭದಲ್ಲಿ ಕಾಫೀ ಕ್ಲಬ್ಬಿನ ಲೇಖನಕ್ಕೆ ಈ ಲಿಂಕ್ ಕ್ಲಿಕ್ಕಿಸಿ.
http://www.kann
ವ್ಯಾಲಂಟೈನ್ಸ್ ಡೇ ಆಚರಣೆ ಬೇಕಾ?
ನಮ್ ಕಾಫಿ ಕ್ಲಬ್ಬಿನಲ್ಲಿ ಈ ರೀತಿಯದೊಂದು ಚರ್ಚೆ ಶುರುವಾಗಿದೆ.
ಇಲ್ಲೇ ಪಕ್ಕದಲ್ಲಿ ಒಂದು ಪೋಲ್ ಇದೆ ನಿಮ್ ಓಟು ಚಲಾಯಿಸಿ, ಜಾಗೋ!
ಇದ್ರ ಬಗ್ಗೆ ಮಾತಾಡ್ಬೇಕು ಅನ್ನೋರು ಇಲ್ಲಿ ಕಮೆಂಟು ಬರೆದು ಹಾಕಿ.
ಚರ್ಚೆಯಿಂದ ಯಾವ ದೇಶವೂ ಉದ್ಧಾರವಾದ ಉದಾಹರಣೆ ಫೆ ೬, ೨೦೦೯ರ ವರೆಗೆ ಒಂದೂ ಕಂಡು ಬಂದಿಲ್ಲ. ಹೀಗಾಗಿ ಉದ್ದುದ್ದ ಬರೆದು ನಿಮ್ಮನ್ನು ಇತರರನ್ನು ಹಿಂಸಿಸಬೇಡಿ.
ಚುಟುಕಾಗಿ, ಮೊನಚಾಗಿ ನಾಲ್ಕು ಸಾಲು ಗೀಚಿ, ಕಾಫಿ ಹಬೆ ಆರುವುದರೊಳಗೆ!